ಬೆಳಗಾವಿ : ಪ್ರತಿ ಕ್ಷೇತ್ರದಲ್ಲೂ ಹೆಣ್ಣುಮಕ್ಕಳು ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಶಾರೀರಕವಾಗಿ ಪುರುಷರಿಗಿಂತ ಹೆಣ್ಣುಮಕ್ಕಳು ಗಟ್ಟಿ ಇಲ್ಲದಿದ್ದರೂ ಮಾನಸಿಕವಾಗಿ ತುಂಬಾ ಸದೃಢರು. ರಾಜಕೀಯ, ಶಿಕ್ಷಣ, ಕೃಷಿ ಕ್ಷೇತ್ರದಲ್ಲಿ ಗಂಡಸರಿಗೆ ಹೆಗಲಾಗಿ ದುಡಿಯುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆ (ಎನ್‌ ಜಿಒ) ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (ಕೆಎಚ್‌ಪಿಟಿ) ವತಿಯಿಂದ ನಡೆದ “ಸ್ಫೂರ್ತಿ” ಹದಿಹರೆಯದ ಹೆಣ್ಣು ಮಕ್ಕಳೊಂದಿಗೆ ನೇರ ಸಂದರ್ಶನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದ ಸಚಿವರು, ಹೆಣ್ಣು ಸಂಸಾರದ ಕಣ್ಣು. ಬಾಲ್ಯ ವಿವಾಹವನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂಬುದು ಸರ್ಕಾರದ ಆಶಯ. ಇದಕ್ಕೆ ಪಾಲಕರು, ಮಹಿಳೆಯರು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದು ಹೇಳಿದರು.

ದೇವರಿಗಿಂತ ಹೆಚ್ಚಾಗಿ ಪಾಲಕರನ್ನು ಗೌರವಿಸಬೇಕು. ಪ್ರೀತಿ, ಪ್ರೇಮ ಅಂತ ಹೋಗದೆ, ತಂದೆ-ತಾಯಿ ಹೇಳಿದಂತೆ ನಡೆದುಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಸಚಿವರು ಹೇಳಿದರು.
ಲಿಂಗ ತಾರತಮ್ಯದ ವಿರುದ್ಧ ಎಲ್ಲರೂ ಹೋರಾಡೋಣ. ಬಾಲ್ಯ ವಿವಾಹ ಹಾಗೂ ಭ್ರೂಣ ಹತ್ಯೆ ಸಮಾಜಕ್ಕೆ ಕಂಟಕವಾಗಿವೆ. ದೇಶಕ್ಕೆ ಅತಿಹೆಚ್ಚು ಒಲಿಂಪಿಕ್ಸ್‌ ಪದಕ ಗೆದ್ದುಕೊಟ್ಟಿರುವುದು ಹೆಣ್ಣುಮಕ್ಕಳೇ, ಹೆಚ್ಚು ಐಎಎಸ್‌ ಅಧಿಕಾರಿಗಳು ಮಹಿಳೆಯರಿದ್ದಾರೆ. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸುತ್ತಾ ಬಂದಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

*ವೈದ್ಯಳಾಗುವ ಕನಸಿತ್ತು*
ನನಗೆ ಚಿಕ್ಕಂದಿನಿಂದಲೂ ವೈದ್ಯಳಾಗುವ ಕನಸಿತ್ತು. ಆದರೆ, ಪುರುಷ ಪ್ರಧಾನ ಸಮಾಜದಲ್ಲಿ ಕರ್ನಾಟಕದ 7 ಕೋಟಿ ಜನರಿಗೆ ಮಹಿಳಾ ಮಂತ್ರಿಯಾಗಿರುವ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು.
ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಓದಿ, ಕೆಂಪು ಬಸ್‌ನಲ್ಲಿ ಓಡಾಡಿರುವೆ. ಎಲ್ಲಾ ಕಷ್ಟಗಳನ್ನು ಮೆಟ್ಟಿನಿಂತು ವಿಧಾನಸೌಧಕ್ಕೆ ಪ್ರವೇಶಿಸಿರುವೆ. ಜೊತೆಗೆ ನನ್ನ ತಮ್ಮನನ್ನು (ವಿಧಾನಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ) ವಿಧಾನಸೌಧಕ್ಕೆ ಕರೆದುಕೊಂಡು ಹೋಗಿರುವೆ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಾನೇ ಸಾಕ್ಷಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕೆ. ಹೆಚ್. ಪಿ. ಟಿ ನಿರ್ದೇಶಕಿ ಶೋಭಾ ಡಿ. ಕೆ. ಹೆಚ್. ಪಿ. ಟಿ ಟೀಮ್ ಲೀಡರ್ ಸತ್ಯನಾರಾಯಣ ಜಿ, ಪ್ರೊಗ್ರಾಮ್‌ ಡೈರೆಕ್ಟರ್ ಅಶೋಕ ಕೋಳಿ ಮುಂತಾದವರು ಉಪಸ್ಥಿತರಿದ್ದರು.