ಬೆಳಗಾವಿ : ಗೃಹಲಕ್ಷ್ಮಿ ಯೋಜನೆಯ ರೂಪದಲ್ಲಿ ರಾಜ್ಯದ ಪ್ರತಿ ಮನೆಗೂ ತಲುಪುವ ಅದೃಷ್ಟ ನನ್ನದಾಗಿದೆ. ಮನೆಯ ಯಜಮಾನಿಯರಿಗೆ ರಾಜ್ಯ ಸರ್ಕಾರ ನೀಡುತ್ತಿರುವ 2000 ರೂಪಾಯಿ ಹಸಿವನ್ನ ನೀಗಿಸಿದೆ. ಗೃಹಲಕ್ಷ್ಮಿ ಯೋಜನೆಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ವಿಶೇಷವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕರಡಿಗುದ್ದಿ ಗ್ರಾಮದಲ್ಲಿ ನೂತನ ಪಶು ಆಸ್ಪತ್ರೆ ಹಾಗೂ ಸಮುದಾಯ ಭವನ ಕಟ್ಟಡಗಳ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಸಚಿವರು, ಗ್ರಾಮದ ಬಹು ದಿನಗಳ ಬೇಡಿಕೆಯಾಗಿರುವ ಪಶು ಆಸ್ಪತ್ರೆ ಹಾಗೂ ಸಮುದಾಯ ಭವನ ನಿರ್ಮಾಣದ ಕನಸು ಇಂದು ಸಾಕಾರಗೊಂಡಿದೆ, ನಿಮ್ಮ ಪ್ರೀತಿ, ಪ್ರೋತ್ಸಾಹ, ಆಶೀರ್ವಾದದಿಂದ ಬರುವ ದಿನಗಳಲ್ಲಿ ಇನ್ನಿತರ ಅಭಿವೃದ್ಧಿ ಕೆಲಸಗಳು ಸಹ ಚಾಲನೆಗೊಳ್ಳಲಿವೆ ಎಂದರು.
ಪಶುಸಂಗೋಪನಾ ಸಚಿವರಾದ ಕೆ.ವೆಂಕಟೇಶ್ ಅವರು ಮುತುವರ್ಜಿ ವಹಿಸಿ ನನ್ನ ಕ್ಷೇತ್ರಕ್ಕೆ ಪಶು ಆಸ್ಪತ್ರೆ ನೀಡಿದರು. ಸುಮಾರು 52 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ. ಗ್ರಾಮದ ಜನರು ಹಾಗೂ ಸುತ್ತಮುತ್ತ ಗ್ರಾಮಸ್ಥರಿಗೆ ಈ ಪಶು ಆಸ್ಪತ್ರೆ ನೆರವಾಗಲಿದೆ. ಕೆ.ವೆಂಕಟೇಶ್ ಅವರಿಗೆ ವೈಯಕ್ತಿವಾಗಿ ಹಾಗೂ ಗ್ರಾಮಸ್ಥರ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಸುಮಾರು 1.20 ಕೋಟಿ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಗೊಳ್ಳಲಿದೆ ಎಂದರು.
* *ಕರಡಿಗುದ್ದಿ ಗ್ರಾಮಕ್ಕೆ ವಿಶೇಷ ಸ್ಥಾನ*
ನನ್ನ ಹೃದಯದಲ್ಲಿ ಕರಡಿಗುದ್ದಿ ಗ್ರಾಮಕ್ಕೆ ವಿಶೇಷ ಸ್ಥಾನವಿದೆ. ಮುಂದಿನ ದಿನಗಳಲ್ಲಿ ಮಾದರಿ ಗ್ರಾಮವನ್ನಾಗಿ ಮಾಡುವುದಾಗಿ ಸಚಿವರು ತಿಳಿಸಿದರು. ಮುಂದೆಯೂ ಗ್ರಾಮಸ್ಥರ ಆಶೀರ್ವಾದ ನನ್ನ ಮೇಲಿರಲಿ ಎಂದು ಹೇಳಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರವ್ವ ಅರಬಳ್ಳಿ, ಸಿದ್ದಪ್ಪ ಚೌಗಲಾ, ರಾಕೇಶ್ ಪಾಟೀಲ, ಶೇಖರಗೌಡ ಕುರಡಗಿ, ಶೀಲಾ ಪಾಟೀಲ, ರೂಪಾ ಬುರವನ್ನವರ, ಸಿ ಆರ್. ಪಾಟೀಲ, ಡಾ. ಆನಂದ ಪಾಟೀಲ, ಬಾಬು ಪಾಟೀಲ, ಸಿದ್ದಪ್ಪ ಮೂಕನವರ, ಹಾಲಪ್ಪ ನೇಸರಗಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.