ಹುಬ್ಬಳ್ಳಿ :
ರಾಮ ಮಂದಿರ ನಿರ್ಮಿಸುವುದರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜಕೀಯ ಇಚ್ಛಾಶಕ್ತಿ ಕಾರಣಕ್ಕೆ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಅದೂ ಶೇ. 40 ರಷ್ಟು ಮಾತ್ರ ನಿರ್ಮಾಣ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಸುಪ್ರೀಂಕೋರ್ಟ್ ಸೂಚಿಸಿದ ಜಾಗದಲ್ಲಿ ಮಂದಿರ ಕಟ್ಟಿಲ್ಲ ಎಂದರು.
ದೇಶದಲ್ಲಿ ಹತ್ತು ವರ್ಷದಿಂದ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ ಎಂದು ಹೇಳಿದ ಸಂತೋಷ್ ಲಾಡ್, ರಾಮ ಮಂದಿರದ ಹೆಸರಿನಲ್ಲಿ ಯಾಕೆ ಮತ ಕೇಳುತ್ತೀರಿ ಎಂದು ಪ್ರಶ್ನಿಸಿದರು.
ಕಳೆದ 10 ವರ್ಷದಲ್ಲಿ ಮೋದಿ ಸರ್ಕಾರ ಏನು ಕೆಲಸ ಮಾಡಿದೆ? ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ದರ ಕಡಿಮೆ ಆಗಿದೆಯಾ? ಬಡವರಿಗೆ ಅನುಕೂಲವಾಗುವ ಒಂದು ಕಾರ್ಯಕ್ರಮ ಮಾಡಿಲ್ಲ. ದೇಶ ಹಳ್ಳ ಹಿಡಿದು ಹೋಗಿದೆ ಎಂದರು.
ಅಧಿಕಾರ ಇದೆ ಎಂದು ದುರುಪಯೋಗ ಮಾಡಬಾರದು. ನೀವು ಪ್ರಭಾವಿಯಾಗಿದ್ದರೆ ಟಿವಿ ಆಫ್ ಮಾಡಿ ಬನ್ನಿ. ರಾಮ ರಹೀಮ್, ಪಾಕಿಸ್ತಾನ, ಅಪಘಾನಿಸ್ತಾನ್ ಹೆಸರು ಮೂಲಕ ಜನರನ್ನು ಹುಚ್ಚರನ್ನಾಗಿ ಮಾಡುತ್ತಾರೆ. ಕಳೆದ ಚುನಾವಣೆಯಲ್ಲಿ ಪುಲ್ವಾಮಾ ದಾಳಿ ಬಗ್ಗೆ ಮಾತಾಡಿದರು. ಹಾಗಿದ್ದರೆ ಆರ್ ಡಿಎಕ್ಸ್ ಹೇಗೆ ಬಂತು? ದೇಶದಲ್ಲಿ ಈ ತರಹ ಚರ್ಚೆಗಳೇ ಆಗುತ್ತಿಲ್ಲ ಎಂದರು.
ಕಾಂಗ್ರೆಸ್ ಹೈಕಮಾಂಡ್ ರಾಜ್ಯಸಭೆ ಟಿಕೆಟ್ ನಿರಾಕರಿಸಿದ ಹಿನ್ನೆಲೆ ಇಂದಿರಾ ಗಾಂಧಿ ಮೂರನೇ ಮಗನಂತಿದ್ದ ಕಮಲನಾಥ್ ಅವರು ಬಿಜೆಪಿ ಸೇರ್ಪಡೆಯಾಗಲು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಸಂತೋಷ್ ಲಾಡ್ ಅವರು, ಸೋತ
ಕಮಲನಾಥ್ ಅವರನ್ನು ತೆಗೆದುಕೊಂಡಿದ್ದೀರಿ
ಎಂದರು. ಕೇವಲ ರಾಮ ಮಂದಿರ, ನಿತೀಶ್ ಕುಮಾರ್, ಕಮಲನಾಥ್ ವಿಚಾರದಿಂದ ಯಾವ ಹಿಂದೂಗೆ ಲಾಭವಾಗಿಲ್ಲ. ಇದಕ್ಕೆಲ್ಲ ಅಂತ್ಯ ಇದೆ, ದೇವರು ಇದ್ದಾನೆ ಎಂದ ಸಂತೋಷ ಲಾಡ್, ಬಿಜೆಪಿ ಏನೂ ಮಾಡಿಲ್ಲ. ಗ್ಯಾರಂಟಿಗಳನ್ನು ನೋಡಿ ಮತ ಹಾಕಿದರೆ ಬಿಜೆಪಿಯವರು ಗೆಲ್ಲಲ್ಲ. ಅಭಿವೃದ್ಧಿ ವಿಚಾರದ ಮೇಲೆ ಚುನಾವಣೆಗೆ ಹೋದರೆ ಬಿಜೆಪಿ ಗೆಲ್ಲಲ್ಲ. ಜನರಿಗೆ ಮೋಸ ಮಾಡಿ ವೋಟ್ ತೆಗೆದುಕೊಳ್ಳುತ್ತಾರೆ. ಮುಂದಿನ 100 ದಿನಗಳಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ ಎಂದರು.
ಲೋಕಸಭೆ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡಿದ ಸಂತೋಷ್ ಲಾಡ್, ನಾನು ಲೋಕಸಭೆ ಚುನಾವಣೆಗೆ ನಿಲ್ಲಲು ಮನಸಿಲ್ಲ. ಲೋಕಸಭೆ ಚುನಾವಣೆ ಸ್ಪರ್ಧೆ ಮಾಡಲು ನನಗೆ ಆಸಕ್ತಿ ಇಲ್ಲ ಎಂದರು.
ಬಿಜೆಪಿ ಕಿಡಿ :
ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದ ಬಳಿಕ ಕಾಂಗ್ರೆಸ್‌ನವರು ಏನೇನೋ ಹೇಳುತ್ತಿದ್ದಾರೆ. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರ ಹೆಸರು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಇವರಿಗೆ ಕಾಂಗ್ರೆಸ್ ಸರ್ಕಾರದಿಂದ ನ್ಯಾಯ ಸಿಕ್ಕಿಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸುಪ್ರೀಂ’ ಸೂಚಿಸಿದ ಸ್ಥಳದಲ್ಲಿ ರಾಮಮಂದಿರ ಕಟ್ಟಿಲ್ಲವೆಂಬ ಸಂತೋಷ್ ಲಾಡ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 140 ಕೋಟಿ ಜನರನ್ನು ಒಗ್ಗೂಡಿಸುವ ಮಂದಿರ ಅದು. ಇದೊಂದು ರಾಷ್ಟ್ರೀಯ ಮಂದಿರ ಎಂದು ಹೇಳಿದ್ದಾರೆ. ಮೋದಿ ಪ್ರಧಾನಿಯಾದ ಬಳಿಕ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತ ಮೂರು ವರ್ಗಕ್ಕೆ ನ್ಯಾಯ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರು ಬಿಜೆಪಿಗೆ ಓಟು ಹಾಕುತ್ತಾರೆ ಎಂದಿದ್ದಾರೆ.
ಇದೊಂದು ಐತಿಹಾಸಿಕ ಬಿಜೆಪಿ ಅಧಿವೇಶನ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯವರ ಭಾಷಣ ಕಾರ್ಯಕರ್ತರಿಗೆ ಪ್ರೇರಣೆ ಕೊಟ್ಟಿದೆ. 10 ವರ್ಷದಲ್ಲಿ ಸಂಘಟನೆ ಅಭಿವೃದ್ಧಿ, ಬಿಜೆಪಿ ಗೆಲುವು, ಕೇಂದ್ರ ಸರ್ಕಾರದ ಕೆಲಸಗಳು ಅವರ ಭಾಷಣಗಳಲ್ಲಿ ಇತ್ತು. ಈ ಬಾರಿ ಕರ್ನಾಟಕ 28ಕ್ಕೆ 28 ಸ್ಥಾನ ಗೆಲ್ಲಲು ನಮಗೆ ಸ್ಪೂರ್ತಿ ಕೊಟ್ಟಿದೆ ಎಂದು ಹೇಳಿದ್ದಾರೆ.
ಸಂತೋಷ್ ಲಾಡ್ ಹೇಳಿಕೆಗೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಿನ ಭೀತಿ ಎದುರಾಗಿದೆ. ಇಂಡಿಯಾ ಮೈತ್ರಿಕೂಟದಲ್ಲಿ ಈಗ ‘ಐ’ ಒಂದೇ ಉಳಿದಿದೆ ಎಂದು ವಾಗ್ದಾಳಿ ನಡೆಸಿದರು.