ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ, ರಿಂಗ್ ರಸ್ತೆ, ಘನತ್ಯಾಜ್ಯ ನಿರ್ವಹಣಾ ಘಟಕ, ನಿರಂತರ ನೀರು ಸೇರಿದಂತೆ ಈಗಾಗಲೇ ಜಿಲ್ಲೆಗೆ ಮಂಜೂರಾಗಿರುವ ಬೃಹತ್ ಯೋಜನೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಿ ಸಕಾಲದಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನನೆಗುದಿಗೆ ಬಿದ್ದಿರುವ ಪ್ರಮುಖ ಯೋಜನೆ ಪ್ರಗತಿ ಕುರಿತು ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಬುಧವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕೆಲವು ಕಾಮಗಾರಿಗಳಿಗೆ ಸ್ಥಳೀಯರ ವಿರೋಧ ಕಂಡುಬಂದಿದೆ. ಅಂತಹ ಕಡೆ ಅವರ ಮನವೊಲಿಸಬೇಕು. ಅಗತ್ಯಬಿದ್ದರೆ ಪೊಲೀಸ್ ಭದ್ರತೆಯೊಂದಿಗೆ ಕಾಮಗಾರಿಗಳನ್ನು ಮುಂದುವರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಭೂಸ್ವಾಧೀನ ಹಾಗೂ ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಕೆಲವೊಂದು ಯೋಜನೆಗಳು ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಇದರಿಂದ ಸಾರ್ವಜನಿಕರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಚಾಲ್ತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಡೆಂಗ್ಯೂ ಹಾಗೂ ಕಾಲರಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಭ್ರೂಣಹತ್ಯೆಗೆ ಸಂಬಂಧಿಸಿ ನಿಗಾ ವಹಿಸಬೇಕು. ನಿರಂತರ ನೀರು ಸರಬರಾಜು ಯೋಜನೆಯ ಕಾಮಗಾರಿಗಳನ್ನು ಚುರುಕುಗೊಳಿಸಬೇಕು ಎಂದು ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಹಳೆ ಪಿ.ಬಿ.ರಸ್ತೆ, ಸಿವಿಲ್ ಆಸ್ಪತ್ರೆ ಬಳಿಯ ಕಾಮಗಾರಿ ಬಳಿಕ ರಸ್ತೆ ಮತ್ತು ಪೈಪ್ ಲೈನ್ ದುರಸ್ತಿ ಮಾಡಿರುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಶಾಸಕ ಆಸಿಫ್(ರಾಜು) ಸೇಠ್ ಅಸಮಾಧಾನ ವ್ಯಕ್ತಪಡಿಸಿದರು.
ಹುದಲಿ ಮೇಲ್ಸೇತುವೆಯ ಪರಿಷ್ಕೃತ ಯೋಜನೆಯ ಪ್ರತಿ ಸಲ್ಲಿಸುವಂತೆ ಸಚಿವ ಸತೀಶ್ ಜಾರಕಿಹೊಳಿ ಅವರು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಸರಕಾರದ ಅನುಮೋದನೆ ಬಳಿಕ ರೇಷನ್ ಕಾರ್ಡು ವಿತರಣೆಗೆ ಸೂಚನೆ:
ಸದ್ಯಕ್ಕೆ ರೇಷನ್ ಕಾರ್ಡುಗಳನ್ನು ನೀಡಲಾಗುತ್ತಿಲ್ಲ; ಸರಕಾರದ ಅನುಮೋದನೆ ದೊರೆತ ತಕ್ಷಣವೇ ರೇಷನ್ ಕಾರ್ಡುಗಳನ್ನು ನೀಡಬೇಕು ಮತ್ತು ಕಾರ್ಡುಗಳ ಸಂಖ್ಯೆಗೆ ಅನುಗುಣವಾಗಿ ಅಗತ್ಯಾನುಸಾರ ಪಡಿತರ ಅಂಗಡಿಗಳಿಗೆ ಪರವಾನಿಗೆ ನೀಡಬೇಕು. ವೈದ್ಯಕೀಯ ತುರ್ತು ಇದ್ದರೆ ಬಿಪಿಎಲ್ ಕಾರ್ಡುಗಳನ್ನು ನೀಡಬೇಕು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ವೈದ್ಯಕೀಯ ತುರ್ತು ಸಂಬಂಧ ೧೬೦ ಅರ್ಜಿಗಳು ಬಾಕಿ ಉಳಿದಿವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿನಿರ್ದೇಶಕ ಶ್ರೀಶೈಲ್ ಕಂಕಣವಾಡಿ ಸಭೆಯಲ್ಲಿ ತಿಳಿಸಿದರು.
ಸಂಭವನೀಯ ಪ್ರವಾಹ ನಿರ್ವಹಣೆಗೆ ಸಿದ್ಧತೆ:
ಸಂಭವನೀಯ ಪ್ರವಾಹ ನಿರ್ವಹಣೆಗೆ ಸಂಬಂಧಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ವಿವರಿಸಿದರು.
ತಾಲ್ಲೂಕುವಾರು ನೋಡಲ್ ಅಧಿಕಾರಿಗಳು ನಿರಂತರವಾಗಿ ಸಭೆಗಳನ್ನು ನಡೆಸುವ ಮೂಲಕ ಗ್ರಾಮ ಮಟ್ಟದಲ್ಲೂ ತಂಡಗಳನ್ನು ರಚಿಸಿಕೊಂಡು ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ತುರ್ತು ರಕ್ಷಣಾ ತಂಡಗಳು ಸನ್ನದ್ಧವಾಗಿವೆ ಎಂದು ತಿಳಿಸಿದರು.

ಬೆಳಗಾವಿ ಉತ್ತರ ಶಾಸಕ ಆಸಿಫ್(ರಾಜು) ಸೇಠ್, ಸವದತ್ತಿ ಶಾಸಕ ವಿಶ್ವಾಸ್ ವೈದ್ಯ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬೆಳಗಾವಿ ಪೋಲಿಸ ಆಯುಕ್ತ ಯಡಾ ಮಾರ್ಟಿನ್ ಮರ್ಬನ್ಯಾಂಗ್, ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.