ಬೆಳಗಾವಿ:
ಬೆಳಗಾವಿಯಲ್ಲಿ ಹೊಸ ವರ್ಷದಂದೇ ಕಿಡಿಗೇಡಿಗಳು ಮತ್ತೆ ಕಿತಾಪತಿ ನಡೆಸಿದ್ದಾರೆ.
ಹೊಸ ವರ್ಷದ ಸಂದರ್ಭದಲ್ಲೇ ರಾತ್ರೋರಾತ್ರಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿ ದರ್ಪ ಮೆರೆದಿದ್ದಾರೆ.

ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ರಾಯಣ್ಣ ವೃತ್ತದ ಬಳಿ ಕಟ್ಟಿದ್ದ ನಾಡಧ್ವಜಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಪುಂಡರ ಈ ಕೃತ್ಯಕ್ಕೆ ಕನ್ನಡ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃತ್ಯ ಎಸಗಿದ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸುವಂತೆ ಹೋರಾಟಗಾರರು ಮನವಿ ಮಾಡಿದ್ದಾರೆ.

ಎರಡು ವರ್ಷದ ಹಿಂದೆ ಖಾನಾಪುರ ತಾಲ್ಲೂಕಿನ ಹಲಸಿಯಲ್ಲಿ ಕನ್ನಡ ಬಾವುಟ ಸುಟ್ಟು ಜಗಜ್ಯೋತಿ ಬಸವೇಶ್ವರರ ಚಿತ್ರಕ್ಕೆ ಸಗಣಿ ಮೆತ್ತಿದ್ದ ಘಟನೆ ನಡೆದಿತ್ತು. ಇದೀಗ ಸುಳಗದಲ್ಲಿ ಕನ್ನಡಿಗರ ಭಾವನೆ ಕೆಣಕಿದವರಿಗೆ ಸರ್ಕಾರ ತಕ್ಕ ಶಿಕ್ಷೆ ನೀಡಬೇಕು ಎಂದು ಕನ್ನಡ ಮುಖಂಡರು ಒತ್ತಾಯಿಸಿದ್ದಾರೆ.