ಮಂಗಳೂರು : ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರು ಅಭಿವೃದ್ಧಿಗೆ ತಮ್ಮದೇ ಆದ ಚಿಂತನೆ ಹಾಗೂ ಕನಸು ಕಂಡಿದ್ದಾರೆ. ರಾಜ್ಯದಲ್ಲಿ ಸದ್ಯ ತಮ್ಮದೇ ಪಕ್ಷದ ಸರಕಾರ ಇದೆ. ಈ ಮೂಲಕ ಪುತ್ತೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿದ್ದು ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತಗೊಳಿಸಲು ಅವರು ಮುಂದಾಗಿದ್ದಾರೆ. ಪುತ್ತೂರಿನ ಅಭಿವೃದ್ಧಿಗೆ ಬೆಂಚ್ ಮಾರ್ಕ್ ಆಗಬಲ್ಲ ಯೋಜನೆ ಹಾಕಿದ್ದೇನೆ. ಕಳೆದ ಒಂದು ವರ್ಷದಲ್ಲಿ ಪುತ್ತೂರು ಕ್ಷೇತ್ರಕ್ಕೆ 1476 ಕೋಟಿ ರೂ. ಅನುದಾನ ಬಂದಿದ್ದು, ಕ್ಷೇತ್ರದ ಜನರಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು ಎಂಬ ಕನಸು ಹೊತ್ತು 1010 ಕೋಟಿ ವೆಚ್ಚದ ಯೋಜನೆ ಕೈಗೊಂಡಿದ್ದೇನೆ. ಈಗಾಗಲೇ ಈ ಯೋಜನೆಗೆ 400 ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿ ಶುರುವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ನಮ್ಮ ಗ್ರಾಮ, ನಮ್ಮ ರಸ್ತೆ ಎನ್ನುವ ಯೋಜನೆ ಹಾಕಿದ್ದು 68 ಕೋಟಿ ವೆಚ್ಚದ ಕಾಮಗಾರಿಗೆ ಮಂಜೂರಾತಿ ಸಿಕ್ಕಿದೆ. ಚತುಷ್ಪಥ ಹೆದ್ದಾರಿಯನ್ನು ಉಪ್ಪಿನಂಗಡಿಯಲ್ಲಿ ರಿ ಅಲೈನ್ನೆಂಟ್ ಮಾಡಿದ್ದು, ಪೆರ್ನೆ, ಬೆಳೆಯೂರಿನಲ್ಲಿ ಎದುರಾಗಿದ್ದ ತೊಂದರೆಯನ್ನು ಸರಿಪಡಿಸಿದ್ದೇನೆ. ಮೆಲ್ಕಾರ್, ಪೆರ್ನೆ ಪ್ಲೈ ಓವರ್ ಡಿಸೆಂಬರ್ ವೇಳೆಗೆ ಪೂರ್ತಿಯಾಗಲಿದೆ. ಮಾರ್ಚ್ ವೇಳೆಗೆ ಕಲ್ಲಡ್ಕ ಪ್ಲೈ ಓವರ್ ಕಾಮಗಾರಿಯೂ ಮುಗಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ರಾಜಧಾನಿ ಬೆಂಗಳೂರು ಬಿಟ್ಟರೆ ದಕ್ಷಿಣ ಕನ್ನಡ ಅತಿ ಹೆಚ್ಚು ತೆರಿಗೆ ನೀಡುವ ಜಿಲ್ಲೆ. ಆದರೆ ಅನುದಾನ ಕೊಡುವುದರಲ್ಲಿ ಕೊನೆಯ ಸ್ಥಾನ ನಮ್ಮದು. ನಾವು ಕೇಳಿಕೊಂಡು ಹೋಗಿ ಅನುದಾನ ಪಡೆದು ತರಬೇಕು. ಜಿಲ್ಲೆಯಾದ್ಯಂತ ಸಮುದ್ರದ ಕಡೆಯಿಂದ ರಿಂಗ್ ರೋಡ್ ಮಾಡಬೇಕೆಂಬ ಕಲ್ಪನೆ ಇದೆ. ಪ್ರತಿವರ್ಷ ಪದವೀಧರರಾಗಿ ಹೊರಬರುವ ಯುವಕ- ಯುವತಿಯರ ಕೈಗೆ ಕೆಲಸ ಕೊಡಬೇಕಾಗಿದೆ. ಪುತ್ತೂರಿನಲಿ 300 ಕೋಟಿ ವೆಚ್ಚದ ಎರಡು ಉದ್ಯಮಗಳು ಮುಂದೆ ಬಂದಿದ್ದು ಸಾಕಷ್ಟು ಜನರಿಗೆ ಉದ್ಯೋಗಾವಕಾಶ ಸಿಗಲಿದೆ. ಜೊತೆಗೆ ಪುತ್ತೂರು ತಾಲೂಕಿನಲ್ಲಿ ಡ್ರೈನೇಜ್ ಸಿಸ್ಟಮ್ ಮಾಡುವ ಯೋಜನೆ ಇದೆ. ಧರ್ಮಸ್ಥಳ, ಕುಕ್ಕೆಗೆ ಬರುವವರಲ್ಲಿ 50 ಶೇ. ಮಂದಿ ಜಿಲ್ಲೆಯ ಪ್ರವಾಸೋದ್ಯಮದ ಕಡೆಗೆ ಹೊರಳಿದರೆ, ಜನರ ಆದಾಯ ಹೆಚ್ಚಬಹುದು. ಉಪ್ಪಿನಂಗಡಿಯಲ್ಲಿ ಕೂಡಲಸಂಗಮದ ರೀತಿ ಡ್ಯಾಮ್ ಮಾಡಿ ನೀರು ನಿಲ್ಲಿಸುವ ಯೋಜನೆ ಇದ್ದು ಪ್ರವಾಸಿಗರು ಬಂದರೆ ಆಕರ್ಷಣೀಯ ತಾಣ ಆಗಲಿದೆ. ಮೆಡಿಕಲ್ ಕಾಲೇಜು ಇಲ್ಲದೆ ಪುತ್ತೂರು, ಸುಳ್ಯ ಬೆಳ್ತಂಗಡಿಯವರು ತುರ್ತು ಅಗತ್ಯಕ್ಕೆ ಮಂಗಳೂರಿಗೆ ಬರಬೇಕಾದ ಸ್ಥಿತಿಯಿದೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ದೂರದಿಂದ ಬಂದು ಹಿಂತಿರುಗಿ ಹೋಗುವಾಗ ಹೆಣವೇ ಆಗುವ ಸ್ಥಿತಿಯಿದೆ. ಇದರ ಜೊತೆಗೆ, ಪುತ್ತೂರಿಗೆ ಮೆಡಿಕಲ್ ಕಾಲೇಜು ಸಿಗಬೇಕೆಂಬ ಕನಸು ಇದೆ. ಕಾಲೇಜು ನಿರ್ಮಾಣಕ್ಕಾಗಿ ತಾಲೂಕಿನಲ್ಲಿ 40 ಎಕ್ರೆ ಜಾಗ ನೋಡಿದ್ದೇವೆ.
ಪುತ್ತೂರಿನಲ್ಲಿ ಸರಿಯಾದ ಮೈದಾನ ಇಲ್ಲ. ಮುಂದಿನ ಪೀಳಿಗೆಗೆ ದೈಹಿಕ ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸುವ ವ್ಯವಸ್ಥೆ ಇಲ್ಲ ಎಂಬುದನ್ನು ಅರಿತು, 20 ಎಕ್ರೆ ಜಾಗ ಹುಡುಕಿ ಸಿಂಥೆಟಿಕ್ ಟ್ರ್ಯಾಕ್ ಮಾಡಲು ಕೇಂದ್ರಕ್ಕೆ ಪ್ರಸ್ತಾಪ ಇಟ್ಟಿದ್ದೇವೆ. ಕರ್ನಾಟಕ ಕ್ರಿಕೆಟ್ ಅಕಾಡೆಮಿಯಿಂದ ಎರಡು ಮೈದಾನ ಮಾಡುವ ಪ್ರಸ್ತಾಪ ಇಟ್ಟಿದ್ದಾರೆ. ಪುತ್ತೂರು ತಾಲೂಕಿನ ಎಲ್ಲೆಡೆ ರಸ್ತೆ ಬದಿ ಹಣ್ಣಿನ ಮರಗಳನ್ನು ಬೆಳೆಸಲು ಸೂಚನೆ ನೀಡಿದ್ದೇನೆ. ಕಾಟು ಮಾವಿನ ಹಣ್ಣು, ನೇರಳೆ, ಪುನರ್ಪುಳಿ ಹೀಗೆ ಹಣ್ಣಿನ ಮರಗಳ ಗಿಡವನ್ನು ನೆಡುವುದಕ್ಕೆ ವ್ಯವಸ್ಥೆ ಮಾಡಿದ್ದೇನೆ. ಹೈದರಾಬಾದ್ ನಿಂದ ರೋಕೊಮಿಲ್ಲಾ ಗಿಡ ತಂದು ನೆಡುತ್ತಿದ್ದೇವೆ.
ಬದಿಯ ಗಿಡಗಳನ್ನು ಕದ್ದೊಯ್ಯುವ ಕೆಲಸ ಮಾಡಬೇಡಿ, ಬೇಕಾದರೆ ಗಿಡವನ್ನು ತಂದು ಕೊಡುತ್ತೇವೆ ಎಂದು ಅಶೋಕ್ ರೈ ಮನವಿ ಮಾಡಿದರು.

ಪೆರ್ಮಲ ಗುಡ್ಡದ ಅಭಿವೃದ್ಧಿಗಾಗಿ ಎರಡು ಕೋಟಿ ಕೊಟ್ಟಿದ್ದು ಆಕರ್ಷಣೀಯ ಮಾಡಲು ವ್ಯವಸ್ಥೆ ಮಾಡಿದ್ದೇನೆ. ಗುಡ್ಡದ ಮೇಲ್ಗಡೆ ದೊಡ್ಡ ಧ್ವಜ ಸ್ತಂಭ ನಿರ್ಮಿಸುವ ಯೋಜನೆ ಇದೆ. ಆಯುಷ್ ಇಲಾಖೆಯಡಿ 15 ಕೋಟಿ ವೆಚ್ಚದಲ್ಲಿ 50 ಆಸ್ಪತ್ರೆ ಬೆಡ್ ಮಾಡಿಸಲು ಯೋಜನೆ ಹಾಕಿದ್ದೇನೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಪ್ರತ್ಯೇಕ ಪ್ಲಾನ್ ಮಾಡಿದ್ದು, ಕೇಂದ್ರ ಪ್ರವಾಸೋದ್ಯಮ ಇಲಾಖೆಯಡಿ 50 ಕೋಟಿ ವೆಚ್ಚದಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲಿದ್ದೇನೆ ಎಂದರು.

ಪುತ್ತೂರು ಕ್ಷೇತ್ರದಲ್ಲಿ ಈವರೆಗೆ ಎರಡು ಸಾವಿರಕ್ಕೂ ಹೆಚ್ಚು ಕಡತ ವಿಲೇವಾರಿ ಮಾಡಿದ್ದೇನೆ. ಭ್ರಷ್ಟಾಚಾರ ರಹಿತ ಕೆಲಸ ಮಾಡಿದ್ದು ಭ್ರಷ್ಟ ವ್ಯವಸ್ಥೆ ಪತ್ತೆಯಾದರೆ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಯಾವುದೇ ಶಾಸಕರಿಗೂ ಅನುದಾನ ಸಿಗಲ್ಲವೆಂದು ಇರಲ್ಲ. ನಾವು ಫಾಲೋ ಅಪ್ ಮಾಡಬೇಕಷ್ಟೇ. ಯಾವುದೇ ಕ್ಷೇತ್ರಕ್ಕೆ 68 ಕಿಮೀ ರಸ್ತೆ ಅಭಿವೃದ್ಧಿಗೆ ಅವಕಾಶ ಇರುತ್ತದೆ. ಇದರಲ್ಲಿ 38 ಕಿಮೀ ಅಭಿವೃದ್ಧಿಗೆ ಹೇಗೂ ಅನುದಾನ ಬರುತ್ತದೆ. ಟ್ಯಾಲೆಂಟ್ ಇದ್ದರೆ ಮತ್ತಷ್ಟು ಅನುದಾನ ತರಲು ಸಾಧ್ಯವಾಗುತ್ತದೆ. ಕನಿಷ್ಠ ಮೂರು ಕಿಮೀನಿಂದ 5 ಕಿಮೀ ಅಭಿವೃದ್ಧಿಗೆ ಅನುದಾನ ಬರುತ್ತದೆ. ನಾವು ಬೇಕಾದ ರೀತಿ ಬಳಸಿಕೊಳ್ಳಬೇಕು ಎಂದು ಹೇಳಿದರು.