ಪುತ್ತೂರು: ಅಧಿಕಾರ ನಮಗೆ ದೇವರು ಕೊಡುವುದು ಜನರ ಸೇವೆ ಮಾಡಲು, ಅವಕಾಶ ಸಿಕ್ಕಾಗ ನಾವು ನಮ್ಮ ಊರಿಗೆ ಏನಾದರೂ ಮಾಡಬೇಕು, ಅದರಲ್ಲೂ ಹುಟ್ಟಿದ ಊರಿನ ಜನರನ್ನು ಎಂದಿಗೂ‌ ಮರೆಯಬಾರದು. ಆದರೆ ಮಾಜಿ ಶಾಸಕರು ಟ್ಯಾಕ್ಸ್ ( ಲಂಚ) ಕೊಟ್ಟಿಲ್ಲ ಎಂದು ತನ್ನ ಸ್ವ ಗ್ರಾಮದವರ ಅಕ್ರಮ ಸಕ್ರಮ ಕಡತವನ್ನೇ ಪೆಂಡಿಂಗ್ ಇಟ್ಟಿರುವುದು ದುರಂತ ಎಂದು ಶಾಸಕ ಅಶೋಕ್ ರೈ ಆರೋಪಿಸಿದರು.

ಮಂಗಳವಾರ ಹಿರೆಬಂಡಾಡಿ ಗ್ರಾಪಂ ಸಭಾಂಗಣದಲ್ಲಿ ನಡೆದ ಅಕ್ರಮ ಸಕ್ರಮ ಬೈಠಕ್ ನ್ನು ಉದ್ಘಾಟಿಸಿ ಮಾತನಾಡಿದರು .
ನನ್ನ ಕಚೇರಿಗೆ ಬಂದಿದ್ದ ಬಹುತೇಕ ಮಂದಿ ಬಜತ್ತೂರು ಮತ್ತು ಹಿರೆಬಂಡಾಡಿ ಗ್ರಾಮದ ಜನರು‌ ನಮಗೆ ಮಾಜಿ ಶಾಸಕರಿಂದ ಅನ್ಯಾಯವಾಗಿದೆ.‌ ನಮ್ಮ ಅಕ್ರಮ ಸಕ್ರಮ ಮತ್ತು 94 ಸಿ ಕಡತವನ್ನು ವಿಲೇವಾರಿ‌ ಮಾಡಿಲ್ಲ ಎಂದು ದೂರಿದ್ದರು. ಯಾವ ಕಾರಣಕ್ಕೆ ಮಾಜಿ ಶಾಸಕರು ಕಡತ ವಿಲೇವಾರಿ ಮಾಡಿಲ್ಲ ಎಂಬುದು ನನಗೆ‌ ಗೊತ್ತಿಲ್ಲ ಬಹುಶಃ ಕಮಿಷನ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪೆಂಡಿಂಗ್ ಇಟ್ಟಿರಬಹುದು ಎಂದು ಶಾಸಕರು ಅನುಮಾನ ವ್ಯಕ್ತಪಡಿಸಿದರು.

ಬಿಜೆಪಿಗೆ ಹಗಲಿರುಳು ಕೆಲಸ ಮಾಡಿದವನಿಗೂ ಮೋಸ:
ಬಿಜೆಪಿಗಾಗಿ ಹಗಲಿರುಳು ಕೆಲಸ ಮಾಡಿದ ವ್ಯಕ್ತಿಯೋರ್ವರು ನನ್ನ ಕಚೇರಿಗೆ ಬಂದು ತಮ್ಮ‌ನೋವನ್ನು ಹೇಳಿಕೊಂಡಿದ್ದು ಪಕ್ಷಕ್ಕಾಗಿ ಬೆವರು ಸುರಿಸಿದ ನನ್ನ ಅಕ್ರಮ ಸಕ್ರಮ ಕಡತ ವಿಲೇವಾರಿಯಾಗಿಲ್ಲ ದಯವಿಟ್ಟು ನೀವು ಮಾಡಿಕೊಡಿ ಎಂದು ಹೇಳಬೇಕಾದರೆ ಮಾಜಿ ಶಾಸಕರು ಯಾರ ಕಡತ ವಿಲೇವಾರಿ ಮಾಡಿದ್ದಾರೆ? ಹಣ ಕೊಟ್ಟವರದ್ದು ಮಾತ್ರ ಅಕ್ರಮ ಸಕ್ರಮ ವಿಲೇವಾರಿ‌ ಮಾಡಿರುವುದು ಬಡವರಿಗೆ ಮಾಡಿದ ಅನ್ಯಾಯವಲ್ಲವೇ ಎಂದು ಹೇಳಿದರು.

5,10,30,40 ,ಸೆಂಟ್ಸ್ ಜಾಗ ಹೊಂದಿದವರ ಅಕ್ರಮ ಸಕ್ರಮ ಕಚೇರಿಯಲ್ಲೇ ಕೊಳೆಯುತ್ತಿದೆ ಇದೆಲ್ಲವೂ ಬಡವರ ಕಡತಗಳು ಎಂದು ಹೇಳಿದ ಶಾಸಕರು ಸಮರ್ಪಕವಾಗಿರುವ ಯಾವ ಕಡತವನ್ನು ಪೆಂಡಿಂಗ್ ಇಡುವುದಿಲ್ಲ ಕೊಟ್ಟೇ ಕೊಡ್ತೇನೆ‌ ಎಂದು ಹೇಳಿದರು.