ಪುತ್ತೂರು: ಪುತ್ತೂರು ತಾಲೂಕು ಪಂಚಾಯತ್‌ಗೆ ನೂತನ ಕಟ್ಟಡ ಮಂಜೂರಾತಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತಂತೆ ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಅರುಂಧತಿ ಅವರ ಜೊತೆ ಶಾಸಕ ಅಶೋಕ್ ರೈ ಅವರು ಮಾತುಕತೆ ನಡೆಸಿ ಶೀಘ್ರದಲ್ಲೇ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ೫೦ ಲಕ್ಷ ಅನುದಾನ ಮಂಜೂರಾಗಿದ್ದು ಕಾಮಗಾರಿ ಆರಂಭಕ್ಕೆ ಸರಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಬೇಕಾಗುತ್ತದೆ. ಈ ವಿಚಾರಕ್ಕೆ ಸಂಬಂದಿಸಿದಂತೆ ಶಾಶಕರು ಮಾತುಕತೆ ನಡೆಸಿದ್ದಾರೆ. ಪಂಚಾಯತ್ ರಾಜ್ ಸಚಿವರ ಜೊತೆ ಗುರುವಾರ ಮಾತುಕತೆ ನಡೆಸಿದ್ದು ಶುಕ್ರವಾರ ಇಲಾಖೆಯ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಪುತ್ತೂರು ತಾಲೂಕು ಪಂಚಾಯತ್ ಗೆ ಹೊಸ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಕಳೆದ ನಾಲ್ಕು ವರ್ಷಗಳಿಂದ ಬೇಡಿಕೆ ಇದ್ದರೂ ಅನುದಾನ ಮಂಜೂರಾಗಿರಲಿಲ್ಲ ಮತ್ತು ಆಡಳಿತಾತ್ಮಕ ಅನುಮೋದನೆಯೂ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಕಟ್ಟಡ ಕಾಮಗಾರಿ ಮತ್ತು ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಕಳೆದ ಮೂರು ವರ್ಷಗಳ ಹಿಂದೆ ಪುತ್ತೂರಿಗೆ ಮಂಜೂರಾಗಿದ್ದ ನೂತನ ಕಟ್ಟಡ ರಾಜಕೀಯ ಇಚ್ಚಾಶಕ್ತಿಯ ಕೊರತೆಯ ಕಾರಣಕ್ಕೆ ಕಡಬಕ್ಕೆ ಸ್ಥಳಾಂತರವಾಗಿತ್ತು. ಪುತ್ತೂರಿನಲ್ಲಿರುವ ಹಳೆಯ ಕಟ್ಟಡವನ್ನು ಅಲ್ಲೇ ಉಳಿಸಿ ಹೊಸ ಜಾಗದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದೆ. ಹೊಸ ಕಟ್ಟಡ ನಿರ್ಮಾಣವಾಗುವುದರ ಜೊತೆಗೆ ಇಲ್ಲಿನ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗುತ್ತದೆ. ಸರಕಾರ ಶೀಘ್ರವೇ ಇದಕ್ಕೆ ಅಡಳಿತಾತ್ಮಕ ಅನುಮೋದನೆ ನೀಡಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.