ಪುತ್ತೂರು; ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಭಾರತ ದೇಶದಲ್ಲಿ ನಾನಾ ಧರ್ಮಗಳಿವೆ, ಜಾತಿಗಳಿವೆ. ಎಲ್ಲರೂ ನಾವು ಭಾರತೀಯರು ಎಂಬ ಭಾವನೆಯಿಂದ ಸೌಹಾರ್ದತೆಯಿಂದ ಬಾಳಿದರೆ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

ಅವರು ಪುತ್ತೂರು ಬದ್ರಿಯಾ ಮಸೀದಿಯಲ್ಲಿ ನಡೆದ ಕರವತ್ತ ವಲಿಯುಲ್ಲಾಹಿ ಯವರ ಉರೂಸ್ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಧರ್ಮಗುರುಗಳು ದ್ವೇಷವನ್ನು ಬಿತ್ತುವ ಕೆಲಸ ಮಾಡಬಾರದು. ಧರ್ಮವನ್ನು ಕಲಿಸಬೇಕಾದ ಧಾರ್ಮಿಕ ಗುರುಗಳು ಜನರ ನಡುವೆ ಸೌಹಾರ್ಧತೆಯನ್ನು ಬೋಧಿಸುವ ಶಿಕ್ಷಕರಾಗಬೇಕು. ರಾಜಕೀಯದಲ್ಲಿ ಧರ್ಮ ಪಾಲನೆ ಮಾಡುವ ಬದಲು ನಾವು ಧರ್ಮದಲ್ಲಿ ರಾಜಕೀಯ ಸೇರಿಸಿಕೊಳ್ಳುತ್ತಿರುವುದೇ ಇಂದಿ ಸಮಸ್ಯೆಗೆ ಮೂಲ ಕಾರಣವಾಗಿದೆ. ಯುವ ಸಮೂಹ ದುಷ್ಟ ಕಾರ್ಯಗಳಿಗೆ ಎಂದೂ ಮುಂದಾಗಬಾರದು. ಇಲ್ಲಿರುವ ಎಲ್ಲಾ ಧರ್ಮಗಳು ಶಾಂತಿ ಸೌಹಾರ್ಧತೆಯನ್ನು ಕಲಿಸುತ್ತದೆಯೇ ವಿನ ಹಿಂಸೆಯನ್ನು ಕಲಿಸುವ ಯಾವ ಧರ್ಮವೂ ಭರತ ಭೂಮಿಯಲ್ಲಿ ಇಲ್ಲ ಎಂದು ಹೇಳಿದ ಶಾಸಕರು ದೇಶದ ಮುಮದಿನ ಯುವ ಸಮೂಹ ದೇಶದಲ್ಲಿ ದ್ವೇಷ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಮಂಗಳೂರು ಖಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಾತನಾಡಿ ಸತ್ಯ, ಧರ್ಮ, ಅಹಿಂಸೆಯ ಮೂಲಕ ಜಗತ್ತಿಗೆ ಸನ್ಮಾರ್ಗವನ್ನು ಬೋಧನೆ ಮಾಡಿದ ಮಹಾನುಭಾವರ ಪೈಕಿ ಪುತ್ತೂರಿನ ಕರವಡ್ತ ವಲಿಯುಲ್ಲಾಹಿಯವರು ಒಬ್ಬರಾಗಿದ್ದು ಅವರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸುವ ಮೂಲಕ ಇದು ಸೌಹಾರ್ದತೆಯ ಕೇಂದ್ರವಾಗಿ ಪರಿಣಮಿಸಿದೆ. ನಮ್ಮ ಪೂರ್ವಜರು ಕಲಿಸಿಕೊಟ್ಟ ನ್ಯಾಯ ಮಾರ್ಗದಲ್ಲಿ ನಾವು ಸಾಗುವ ಮೂಲಕ ಅವರಿಗೆ ಗೌರವ ನೀಡುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಪುತ್ತೂರು ಕೇಂದ್ರ ಜುಮಾ ಮಸೀದಿ ಮುದರಿ ಸಯ್ಯದ್ ಅಹ್ಮದ್ ಪೂಕೋಯಾ ತಂಬಳ್ ಪುತ್ತೂರು, ಜಮಾತ್ ಕಮಿಟಿ ಮಾಜಿ ಅಧ್ಯಕ್ಷ ಎಲ್ ಟಿ ರಝಾಕ್ ಹಾಜಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಹುಸೈನ್ ದಾರಿಮಿ ರೆಂಜಲಾಡಿ, ಸಿರಾಜುದ್ದೀನ್ ಫೈಝಿ ಬಪ್ಪಳಿಗೆ, ಉಮ್ಮರ್ ದಾರಿಮಿ ಸಾಲ್ಮರ, ಅಬ್ಬಾಸ್ ಮದನಿ ಗಟ್ಟಿಮನೆ, ಉಸ್ಮಾನ್ ಚೆನ್ನಾವರ ಸೇರಿದಂತೆ ಹಲವು ಮಂದಿ ಮುಖಂಡರು ಉಪಸ್ಥಿತರಿದ್ದರು. ಅನ್ಸಾರುದ್ದೀನ್ ಜಮಾತ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಆಝಾದ್ ಸ್ವಾಗತಿಸಿ, ಕೆ ಎಂ ಕೊಡುಂಗಾಯಿ ವಂದಿಸಿದರು.