ಪುತ್ತೂರು: ಕಾರ್ಯಕರ್ತರೇ ಪಕ್ಷದ ಆಧಾರಸ್ತಂಬಗಳು, ಕಾರ್ಯಕರ್ತರ ಭಾವನೆಗೆ ಪಕ್ಷದ ಮುಖಂಡರು ಗೌರವ ನೀಡಬೇಕು, ಪಕ್ಷದ ಸಭೆಗಳು ಬೂತ್ ಮಟ್ಟದ ಕಾರ್ಯಕರ್ತರ ಮನೆಯಲ್ಲೇ ನಡೆಸಬೇಕು ಆ ಮುಲಕ ಪಕ್ಷವನ್ನು ಗಟ್ಟಿಗೊಳಿಸಬೇಕಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಡಿ.೭ ರಂದು ನಡೆದ ಪಕ್ಷದ ಕಾರ್ಯಕರ್ತರ ಸಭೆ ಮತ್ತು ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
ಶಾಸಕರಾದರೂ ಅವರು ಪಕ್ಷಕ್ಕಿಂತ ದೊಡ್ಡವರಲ್ಲ, ಇಲ್ಲಿ ಪಕ್ಷವೇ ಮುಖ್ಯ ಹೊರತು ವ್ಯಕ್ತಿ ಮುಖ್ಯವಲ್ಲ. ಚುನಾವಣೆಯ ಸಂದರ್ಭದಲ್ಲಿ ಪ್ರತೀ ಮತದಾರನ ಮನೆ ಬಾಗಿಲಿಗೆ ಹೋಗಿ ಮತ ಕೇಳುವ ಕಾರ್ಯಕರ್ತರಿಗೆ ಪಕ್ಷದಲ್ಲಿ ಯಾವತ್ತೂ ಗೌರವ, ಸ್ಥಾನ ಮಾನವಿದೆ, ಕಾರ್ಯಕರ್ತರ ನೋವಿಗೆ ಸ್ಪಂದಿಸುವ ಮನೋಭಾವ ಎಲ್ಲರಲ್ಲೂ ಇರಬೇಕು, ಕಾರ್ಯಕರ್ತ ಮನಸ್ಸು ಮಾಡಿದರೆ ಪ್ರತೀ ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಸಾಧ್ಯ ಇದಕ್ಕಾಗಿ ಪಕ್ಷದ ಸಭೆಗಳನ್ನು ಬೂತ್ ಮಟ್ಟದ ಕಾರ್ಯಕರ್ತರ ಮನೆಯಲ್ಲೇ ನಡೆಸಬೇಕು ಎಂದು ಹೇಳಿದರು.
ಪಂಚ ಗ್ಯಾರಂಟಿಗಳು ನಮಗೆ ವರದಾನ
ರಾಜ್ಯದ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಗಳು ಪ್ರತೀ ಕುಟುಂಬಕ್ಕೂ ತಲುಪಿದೆ ಇದನ್ನೇ ಮುಂದಿಟ್ಟು ನಾವು ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆಗೊಳಿಸಬೇಕು. ಇದುವರೆಗೆ ಯಾವ ಸರಕಾರವೂ ಮಾಡದ ಬಡವರ ಕಲ್ಯಾಣದ ಗ್ಯಾರಂಟಿ ಯೋಫಜನೆಯನ್ನು ನಾವು ತಂದಿದ್ದೇವೆ, ಗ್ರಾಮದ ಪ್ರತೀ ಮನೆ ಮನೆಗೂ ಗ್ಯಾರಂಟಿ ವಿಚಾರದ ಬಗ್ಗೆ ಮಾತನಾಡುವಂತಾಗಬೇಕು. ಗ್ಯಾರಂಟಿ ಯೋಜನೆಯಿಂದ ಪ್ರತೀ ಕುಟುಂಬ ಇಂದು ಸ್ವಾವಲಂಬನೆಯಿಂದ ಜೀವನ ನಡೆಸುತ್ತಿದೆ ಇದನ್ನು ಪಕ್ಷ ಮತವಾಗಿ ಪರಿವರ್ತನೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಕೃಷಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ
ಬೆಳೆ ವಿಮೆ ಕೃಷಿಕರಿಗೆ ನೀಡಲಾಗುತ್ತಿದೆ, ಇದರಲ್ಲಿ ೬೦ ಶೇ ವಿಮಾ ಮೊತ್ತವನ್ನು ಪಾವತಿ ಮಾಡುವುದು ರಾಜ್ಯದ ಕಾಂಗ್ರೆಸ್ ಸರಕಾರವಾಗಿದೆ ಆದರೆ ಬಿಜೆಪಿ ಅಧೀನದಲ್ಲಿರುವ ಸಹಕಾರಿ ಸಂಘಗಳು ಬೆಳೆ ವಿಮೆ ಬಿಜೆಪಿ ಸರಕಾರ , ಕೇಂದ್ರ ಸರಕಾರದ ಯೋಜನೆಯಾಗಿದೆ ಎಂದು ಸುಳ್ಳು ಮಾಹಿತಿ ನೀಡುತ್ತಿದೆ ಇದರಬಗ್ಗೆ ಕಾರ್ಯಕರ್ತರು ಮಾಹಿತಿ ತಿಳಿ ಹೇಳುವ ಕೆಲಸವನ್ನು ಮಾಡಬೇಕು. ಕಾಂಗ್ರೆಸ್ ಮಾಡಿದ ಕೆಲಸಕ್ಕೆ ಬಿಜೆಪಿಯವರು ಬೋರ್ಡು ಹಾಕುತ್ತಿದ್ದಾರೆ. ಅವರು ಅಧಿಕಾರದಲ್ಲಿರುವಾಗ ಬಡವ ರನ್ನು , ಕೃಷಿಕರನ್ನು ಸಂಪೂರ್ಣ ಮರೆತಿದ್ದರು ಈಗ ಯಾರೋ ಮಾಡಿದ ಒಳ್ಳೆಯ ಕೆಲಸಕ್ಕೆ ಶಾಲು ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಫೇಕ್ ವಿಡಿಯೋ ಕ್ರಿಯೇಟ್
ಕಾಂಗ್ರೆಸ್ ವಿರೋಧಿಗಳು ಫೇಕ್ ವಿಡಿಯೋ ಕ್ರಿಯೇಟ್ ಮಾಡಿ ಅದನ್ನು ಸಾಮಾಜಿಕ ತಾಣದಲ್ಲಿ ಹರಿಯಬಿಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವ ರಾಜ್ಯಗಳ ಹೆಸರನ್ನು ನಮೂದಿಸಿ ಇದು ಅಲ್ಲಿ ನಡೆದ ಘಟನೆ, ಇದು ಇಲ್ಲಿ ನಡೆದ ಘಟನೆ ಎಂದು ಮುಗ್ದ ಜನರನ್ನು ಭಯಭೀತಗೊಳಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಇದರ ಬಗ್ಗೆಯೂ ಜನರು ಜಾಗೃತರಾಗಿರಬೇಕು. ಅಧಿಕಾರಕ್ಕಾಗಿ ಬಿಜೆಪಿ ಎಂಥಾ ನೀಚ ಕೃತ್ಯಕ್ಕೂ ಕೈ ಹಾಕುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಎಂದ ಶಾಸಕರು ಯುವಕರನ್ನು ಧರ್ಮ, ಜಾತಿ ಹೆಸರಿನಲ್ಲಿ ಬಳಸಿ ಅವರ ಮೇಲೆ ಕೇಸು ಬಿದ್ದಾಗ ಅವರನ್ನು ದೂರ ಮಾಡಲಾಗುತ್ತದೆ. ತಾಯಂದಿರು ತಮ್ಮ ಮಕ್ಕಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಶಾಸಕರು ಮನವಿ ಮಾಡಿದರು.
ಅನುದಾನ ಹುಡುಕಿ ಹುಡುಕಿ ತರುತ್ತಿದ್ದೇನೆ
ಎಲ್ಲೆಲ್ಲಿ ಅನುದಾನ ಸಿಗುತ್ತದೆಯೋ ಅದೆಲ್ಲವನ್ನೂ ಹುಡುಕಿ ಪುತ್ತೂರಿಗೆ ತರುವ ಕೆಲಸವನ್ನು ಮಾಡುತ್ತಿದ್ದೇನೆ. ರಾಜ್ಯ ಸರಕಾರದಿಂದ ಮತ್ತು ಕೇಂದ್ರ ಸರಕಾರದಿಂದ ದೊರೆಯುವ ಅನುದಾನಕ್ಕೂ ಕಣ್ಣು ಇಟ್ಟಿದ್ದೇನೆ, ಎಲ್ಲಿಂದೆಲ್ಲಾ ತರಲು ತನ್ನಿಂದ ಸಾಧ್ಯವೋ ಅದೆಲ್ಲವನ್ನೂ ಕ್ಷೇತ್ರದ ಅಭಿವೃದ್ದಿಗಗಿ ತರುವ ಕೆಲಸವನ್ನು ಮಾಡುತ್ತೇನೆ. ಪುತ್ತೂರು ಅಭಿವೃದ್ದಿಯಾಗಬೇಕು, ಇಲ್ಲಿ ಉದ್ಯಮ ಬರಬೇಕು, ಪುತ್ತೂರಿನಲ್ಲಿ ದೊಡ್ಡ ಕ್ರೀಡಾಂಗಣ, ಆರ್‌ಟಿಒ ಟ್ರ್ಯಾಕ್, ಆಯುಷ್ ಆಸ್ಪತ್ರೆ, ರಸ್ತೆಗಳ ಅಭಿವೃದ್ದಿ, ಬಿರುಮಲೆ ಬೆಟ್ಟದ ಅಭಿವೃಧ್ದಿ, ಸಿಡಿಲು ನಿರ್ಬಂಧಕ ಟವರ್ ಹೀಗೇ ಹತ್ತು ಹಲವು ಯೋಜೆನಗಳು ಪುತ್ತೂರಿಗೆ ಬಂದಿದೆ, ಮುಂದೆಯೂ ಬರುತ್ತದೆ. ಏನಾದರೂ ಸರಿ ಪುತ್ತೂರು ಅಭಿವೃದ್ದಿಯಾಗಬೇಕು, ಇಲ್ಲಿಗೆ ಹಣದ ಹೊಳೆಯೇ ಹರಿದು ಬರಬೇಕಿದೆ ಇದಕ್ಕಾಗಿ ಪಕ್ಷಾತೀತವಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಅಶೋಕ್ ರೈ ಮನವಿ ಮಾಡಿದರು.
ಸಭೆಯನ್ನುದ್ದೇಶಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್,ದ ಕ ಜಿಲ್ಲಾ ಸಹಕಾರಿ ಕಾಂಗ್ರೆಸ್ ಅಧ್ಯಕ್ಷರಾದ ಸುದರ್ಶನ್ ಜೈನ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಪಿ ಆಳ್ವ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದಾಲಿ, ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ, ರೈ ಎಜುಕೇಶನಲ್ ಆಂಡ್ ಚಾರಿಟೇಬಲ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ದ ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ರಮನಾಥ ವಿಟ್ಲ, ಪಟ್ಟಣ ಪಂಚಾಯತ್ ಸದಸ್ಯರಾದ ವಿಕೆ ಎಂ ಅಶ್ರಫ್, ಹಸೈನಾರ್ ನೆಲ್ಲಿಗುಡ್ಡೆ, ಡೀಕಯ್ಯ ವಿಟ್ಲ, ಪದ್ಮಿನಿ, ಲತಾ ಅಶೋಕ್, ಹಾನೆಸ್ಟ್ ಇಕ್ಬಾಲ್ ಸುನಿತಾ ಕೋಟ್ಯಾನ್, ಸೇರಿದಂತೆ ಗ್ರಾಪಂ ಅಧ್ಯಕ್ಷರು, ವಲಯ ಕಾಂಗ್ರೆಸ್ ಅಧ್ಯಕ್ಷರುಗಳು, ಬೂತ್ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.,
ಶ್ರೀನಿವಾಸ್ ಶೆಟ್ಟಿ ಕೊಲ್ಯ ಸ್ವಾಗತಿಸಿ ವಂದಿಸಿದರು.