
ಸದನದಲ್ಲಿ ಶಾಸಕರು ಪ್ರಸ್ತಾಪಿಸಿದ ಪ್ರಮುಖ ವಿಷಯಗಳು: ಪ್ರತೀ ಬಜೆಟ್‌ನಲ್ಲಿ ಜಿಲ್ಲೆಗೆ ಅನುದಾನ ಕಡಿಮೆ, ತೆರಿಗೆ ಪಾವತಿಯಲ್ಲಿ ಎರಡನೇ ಸ್ಥಾನ: ಜನತೆ ಇನ್ನೂ ಗುಡಿಸಲಲ್ಲಿ ವಾಸ, ಗುಡ್ಡೆ ಕುಸಿತಕ್ಕೆ ಹಾನಿಗೊಂಡ ಮನೆಗೆ ಪರಿಹಾರ, ರಸ್ತೆ ದುರಸ್ಥಿ ಮಾಡಿಲ್ಲ, ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ, ಮಂಗಳೂರಿನಲ್ಲಿ ಮಂಗಳಾ ಕಾರ್ನಿಶ್ ರಸ್ತೆ ನಿರ್ಮಾಣ,
ದೇವಸ್ಥಾನಗಳ ಸಂಪರ್ಕ ರಸ್ತೆ ಅಭಿವೃದ್ದಿ, ಕಂಬಳಕ್ಕೆ ಪ್ರೋತ್ಸಾಹ, ತುಳು ಹೆಚ್ಚುವರಿ ಭಾಷೆಯನ್ನಾಗಿಸಿ, ಕೊಯಿಲದಲ್ಲಿ ಪಶು ವೈದ್ಯಕೀಯ ಕಾಲೇಜು ಆರಂಭ,ಎಸ್ ಪಿ ಕಚೇರಿ ಪುತ್ತೂರಿಗೆ ಸ್ಥಳಾಂತರ,
ಏರ್‌ಪೋರ್ಟ್ ರನ್‌ವೇ ವಿಸ್ತರಿಸಿ, ಉಪ್ಪಿನಂಗಡಿಯಲ್ಲಿ ಬಸ್ ನಿಲ್ದಾಣ ಸ್ಥಾಪನೆ,
ಸರೋಜಿನಿ ಮಹಿಷಿ ವರದಿ ಜಾರಿ ಮಾಡಿ, ಸ್ಥಳೀಯರಿಗೆ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸಿ,
ಮಂಗಳೂರಿನಲ್ಲಿ ಐಟಿ ಪಾಕ್ ಸ್ಥಾಪಿಸಿ, ಕುಮ್ಕಿ ಭೂಮಿಯನ್ನು ಕಾನೂನು ರಚಿಸಿ ರೈತರಿಗೆ ನೀಡಿ, ಬಂಟ, ಬಿಲ್ಲವ ಮತ್ತು ಬ್ಯಾರಿ ಅಕಾಡೆಮಿ ಸ್ಥಾಪಿಸಿ
ಪುತ್ತೂರು: ಇಂದು ವಿಧಾನಸಭಾ ಅಧಿವೇಶನದಲ್ಲಿ ನಮೂನೆ ೬೯ ರ ಅಡಿಯಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ದಿ ಮತ್ತು ಸಮಸ್ಯೆಗಳ ಕುರಿತಂತೆ ಚರ್ಚಿಸಲು ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ಅವರು ಅವಕಾಶ ಕಲ್ಪಿಸಿದ್ದರು. ಈ ಚರ್ಚೆಯಲ್ಲಿ ಕರಾವಳಿ ಜನರ ಸಮಸ್ಯೆಗಳ ಮತ್ತು ಆಗಬೇಕದ ಅಭಿವೃದ್ದಿ ಕೆಲಸಗಳ ಬಗ್ಗೆ ಚರ್ಚೆ ನಡೆಯಿತು. ಚರ್ಚೆಯಲ್ಲಿ ಕರಾವಳಿಯ ಎಲ್ಲಾ ಶಾಸಕರು ಭಾಗವಹಿಸಿದರು. ಆದರೆ ಈ ಅವಕಾಶವನ್ನು ಹೆಚ್ಚಾಗಿ ಬಳಸಿಕೊಂಡದ್ದು ಪುತ್ತೂರು ಶಾಸಕ ಅಶೋಕ್ ರೈ. ಹತ್ತು ನಿಮಿಷಗಳ ಕಾಲ ಸದನದಲ್ಲಿ ಮತನಾಡಿದ ಶಾಸಕರು ಕರಾವಳಿ ಜಿಲ್ಲೆ ಮತ್ತು ತನ್ನ ಕ್ಷೇತ್ರದ ಸಮಸ್ಯೆಗಳನ್ನು ಜೊತೆಯಾಗಿ ಸಭೆಯಲ್ಲಿ ಮಂಡಿಸಿದರು.
ಪ್ರಾರಂಭದಲ್ಲಿ ಮಾತನಾಡಿದ ಶಾಸಕರು ಪ್ರತೀ ಬಾರಿ ಬಜೆಟ್‌ನಲ್ಲಿ ಕರಾವಳಿಗೆ ಅನುದಾನವೇ ಕಡಿಮೆ ಇಡಲಾಗುತ್ತದೆ, ನಾವು ತೆರಿಗೆ ಪಾವತಿ ಮಾಡುವುದರಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ, ನಮ್ಮ ಜಿಲ್ಲೆಯನ್ನು ಶ್ರೀಮಂತ ಜಿಲ್ಲೆ ಎಂದು ಕರೆಯುತ್ತಾರೆ. ಆದರೆ ನಮ್ಮ ಜಿಲ್ಲೆ ಸೇರಿದಂತೆ ತನ್ನ ಕ್ಷೇತ್ರದಲ್ಲಿ ಇಂದಿಗೂ ಗುಡಿಸಲಿನಲ್ಲಿ ಜನ ವಾಸ ಮಾಡುವ ಪರಿಸ್ಥಿತಿ ಇದೆ ಎಂದು ಸದನದ ಗಮನ ಸೆಳೆದರು.
ಮಳೆಹಾನಿ ಪರಿಹಾರ ನೀಡಬೇಕು:
ಕಳೆದ ಬಾರಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಬಂದಿದೆ. ಧರೆ ಕುಸಿದು ಅನೇಕ ಮನೆಗಳಿಗೆ ಹಾನಿಯಾಗಿದೆ. ರಸ್ತೆಗಳು ಮುಚ್ಚಲ್ಪಟ್ಟಿದೆ. ಧರೆ ಕುಸಿತದಿಂದ , ಗುಡ್ಡ ಕುಸಿತದಿಂದ ಹಾನಿಗೊಳಗಾದ ಮನೆಗಳಿಗೆ ನಾಲ್ಕು ಲಕ್ಷ ರೂ ನೀಡುವುದಾಗಿ ಕಂದಾಯ ಸಚಿವರು ಹೇಳಿದ್ದರು, ಇದರಲ್ಲಿ ಒಂದು ಲಕ್ಷ ಅನುದಾನ ಬಂದಿದೆ ಇನ್ನೂ ಮೂರು ಲಕ್ಷ ಅನುದಾನ ಬರಲು ಬಾಕಿ ಇದೆ. ಅದನ್ನು ತಕ್ಷಣ ಬಿಡುಗಡೆ ಮಾಡಬೇಕು. ಗುಡ್ಡ ಕುಸಿತದಿಂದ ಸಂಪರ್ಕ ಕಳೆದುಕೊಂಡ ರಸ್ತೆಗಳ ಪುನರ್ ನಿರ್ಮಾಣವಾಗಬೇಕು, ಅಲ್ಲಿನ ಮಣ್ಣು ತೆರವು ಮಾಡುವ ಕೆಲಸವನ್ನು ಮಾಡಬೇಕು ಎಂದು ಆಗ್ರಹಿಸಿದರು. ಧರೆ ಕುಸಿತದಿಂದ ಹಾನಿಗೊಳಗಾದ ರಸ್ತೆಗಳನ್ನು ದುರಸ್ಥಿ ಮಾಡುವ ಕೆಲಸ ಶೀಘ್ರವೇ ಆಗಬೇಕು ಎಂದು ಮನವಿ ಮಾಡಿದರು.೩೦೦ ಕೋಟಿ ರೂ ಅನುದಾನ ನೀಡುವುದಾಗಿ ಸರಕರ ಹೇಳಿದ್ದರೂ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ ಎಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ :
ಜಿಲ್ಲೆ ಸೇರಿದಂತೆ ಪುತ್ತೂರು ವಿದಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿಯೇ ಇದೆ. ಎತ್ತಿನಹೊಳೆ ಯೋಜನೆಯಿಂದ ನಮ್ಮ ನದಿಗಳು ಬತ್ತಿ ಹೋಗುವ ಲಕ್ಷಣಗಳಿವೆ. ಇದಕ್ಕಾಗಿ ಡ್ಯಾಮ್‌ಗಳನ್ನು ನಿರ್ಮಾಣ ಮಾಡಿ ನೀರು ಶೇಖರಿಸಬೇಕಾಗಿದ್ದು , ಪಶ್ಚಿಮ ವಾಹಿನಿ ಯೋಜನೆಗೆ , ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಹೆಚ್ಚಿನ ಅನುದಾನವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು. ಅದರಂತೆ ಉಪ್ಪಿನಂಗಡಿಯಲ್ಲಿ ಅಣೆಕಟ್ಟು ನಿರ್ಮಾಣ ಯೋಜನೆಗೆ ಸರಕಾರ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು,. ಕಿಂಡಿ ಡ್ಯಾಂ ನಿರ್ಮಾಣ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಬರ ಎದುರಾಗುವ ಸಂಭವ ಇದೆ ಎಂದು ಶಾಸಕರು ಸಭೆಗೆ ತಿಳಿಸಿದರು.
ಮಂಗಳಾ ಕಾರ್ನಿಶ್ ರಸ್ತೆ ನಿರ್ಮಾಣವಾಗಲಿ:
ಮಂಗಳೂರಿನಲ್ಲಿ ಮಂಗಳಾ ಕಾರ್ನಿಶ್ ರಸ್ತೆ ನಿರ್ಮಾಣವಾಗಬೇಕಿದೆ. ಇದಕ್ಕೆ ಸುಮಾರು ೮೦೦ ಕೋಟಿ ರೂ ಅನುದಾನ ಬೇಕಾಗಿದ್ದು, ಈ ರಸ್ತೆಯ ನಿರ್ಮಾಣವಾದಲ್ಲಿ ಇದು ಸಮುದ್ರತೀರವನ್ನು ಅಭಿವೃದ್ದಿ ಮಾಡುತ್ತದೆ. ಈ ಯೋಜನೆ ಅನುಷ್ಠಾನಕ್ಕೆ ಬಂದಲ್ಲಿ ಮಂಗಳೂರಿನಲ್ಲಿ ಟೂರಿಸಂ ಅಭಿವೃದ್ದಿಯಾಗುತ್ತದೆ. ಟೂರಿಸಂ ಕೇಂದ್ರ ಅಭಿವೃದ್ದಿಯಾದಲ್ಲಿ ಒಂದಷ್ಟು ಜನರಿಗೆ ಉದ್ಯೋಗವೂ ದೊರಕಿದಂತಾಗುತ್ತದೆ ಇದಕ್ಕೆ ಸರಕಾರ ಮುತುವರ್ಜಿವಹಿಸಬೇಕು ಎಂದು ಮನವಿ ಮಾಡಿದರು.
ದೇವಸ್ಥಾನಗಳ ಸಂಪರ್ಕ ರಸ್ತೆ ಅಭಿವೃದ್ದಿ: ಜಿಲ್ಲೆಯ ಪ್ರಸಿದ್ದ ದೇವಸ್ಥಾನಗಳ ಸಂಪರ್ಕ ಅಭಿವೃದ್ದಿ ಯಾಗಬೇಕಿದೆ. ಜಿಲ್ಲೆಯ ಪ್ರಸಿದ್ದ ದೇವಸ್ಥಾನಗಳಿಗೆ ದೇಶಾದ್ಯಂತ ಇರುವ ವಿಐಪಿ, ವಿವಿಐಪಿಗಳು ಭೇಟಿ ನೀಡುತ್ತಾರೆ. ಜಿಲ್ಲೆಯಲ್ಲಿ ಅವರಿಗೆ ಉತ್ತಮ ಅತಿಥ್ಯವೂ ದೊರೆಯುತ್ತದೆ. ರಸ್ತೆಗಳ ಅಭಿವೃದ್ದಿಯಾದಲ್ಲಿ ಇನ್ನಷ್ಟು ಭಕ್ತಾದಿಗಳು ಹೆಚ್ಚಾಗಲಿದ್ದು ಇದು ಜಿಲ್ಲೆಯ ಗರಿಮೆಯನ್ನು ಹೆಚ್ಚಿಸಲಿದ್ದು ಸರಕಾರ ಈ ವಿಚಾರದಲ್ಲಿ ಗಮನಹರಿಸಬೇಕು ಎಂದು ಮನವಿ ಮಾಡಿದರು.
ತುಳು ಹೆಚ್ಚುವರಿ ಭಾಷೆಯನ್ನಾಗಿಸಿ:
ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಮಾಡಬೇಕು. ಈ ಹಿಂದೆ ನಾನು ನಾಲ್ಕು ಬಾರಿ ಸದನದಲ್ಲಿ ಪ್ರಸ್ತಾಪ ಮಾಡಿದ್ದೇನೆ, ಮುಂದಿನ ದಿನಗಳಲ್ಲಿ ಈ ಬೇಡಿಕೆಯನ್ನು ಈಡೇರಿಸಿ ಎಂದು ಆಗ್ರಹಿಸಿದರು.
ಕೊಯಿಲದಲ್ಲಿ ಪಶುವೈಧ್ಯಕೀಯ ಕಾಲೇಜು ಆರಂಭ: ಉಪ್ಪಿನಂಗಡಿಯ ಕೊಯಿಲದಲ್ಲಿ ಪಶು ವೈದ್ಯಕೀಯ ಕಾಲೇಜು ಆರಂಭ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.ಈಗಾಗಲೇ ೨೪ ಕೋಟಿ ರೂ ಅನುದಾನ ಮಂಜೂರು ಮಾಡಿದ್ದು ಈ ವರ್ಷದಿಂದಲೇ ಕಾಲೇಜು ಆರಂಭಕ್ಕೆ ಸರಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಎಸ್ ಪಿ ಕಚೇರಿಯನ್ನೂ ಪುತ್ತೂರಿಗೆ ಸ್ಥಳಾಂತರ ಮಾಡುವ ಮೂಲಕ ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗದ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸುವಂತೆ ಸರಕಾರದ ಗಮನ ಸೆಳೆದರು.
ಏರ್‌ಪೋರ್ಟ್ ರನ್‌ವೇ ವಿಸ್ತರಿಸಿ:
ಮಂಗಳೂರಿನ ವಿಮಾನ ನಿಲ್ದಾಣದ ರನ್‌ವೇ ಚಿಕ್ಕದಾಗಿದ್ದು ದೊಡ್ಡ ವಿಮಾನಗಳು ಲ್ಯಾಂಡ್ ಆಗಲು ಸಾದ್ಯವಾಗುತ್ತಿಲ್ಲ. ರನ್‌ವೇ ಅಪಾಯಕಾರಿ ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ. ಏರ್‌ಪೋರ್ಟನ್ನು ಅದಾನಿ ಸಂಸ್ಥೆಗೆ ಕೇಂದ್ರ ಸರಕಾರ ಗುತ್ತಿಗೆ ನೀಡಿದ್ದು, ರಾಜ್ಯ ಸರಕಾರ ಕೇಂದ್ರ ಸರಕಾರ ಮೂಲಕ ಮಾತುಕತೆ ನಡೆಸಿ ಅಥವಾ ಕಾನೂನು ರೂಪಿಸಿ ಗುತ್ತಿಗೆ ಪಡೆದ ಅದಾನಿ ಸಂಸ್ಥೆಗೆ ರನ್‌ವೇ ವಿಸ್ತರಿಸುವಂತೆ ಸೂಚನೆಯನ್ನು ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.
ಸರೋಜಿನಿ ವರದಿ ಜಾರಿಯಾಗಲಿ:
ರಾಜ್ಯದಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡಬೇಕು. ಸ್ಥಳೀಯ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳಲ್ಲಿ ಸ್ಥಳೀಯ ಜನರಿಗೆ ಉದ್ಯೋಗವನ್ನು ಕಲ್ಪಿಸಬೇಕು. ಜಿಲ್ಲೆಯಲ್ಲಿ ಆರಂಭವಾಗುವ ಉದ್ಯಮದಲ್ಲಿ ಇಲ್ಲಿನವರಿಗೇ ಉದ್ಯೋಗ ಕೊಡಿಸುವಲ್ಲಿ ಈ ವರದಿಯು ನೆರವಾಗುತ್ತದೆ ಸರಕರ ಕೂಡಲೇ ಈ ವರದಿಯನ್ನು ಜಾರಿಮಾಡಬೇಕು ಎಂದು ಆಗ್ರಹಿಸಿದರು. ಮಂಗಳೂರಿನಲ್ಲಿ ಐ ಟಿ ಪಾರ್ಕ್ ಸ್ಥಾಪನೆ ಮಾಡುವ ಮೂಲಕ ಜಿಲ್ಲೆಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಶಾಸಕರು ಆಗ್ರಹಿಸಿದರು.
ಕುಮ್ಕಿಯನ್ನು ಅಕ್ರಮ ಸಕ್ರಮದಲ್ಲಿ ಸೇರಿಸಿ:
ಕುಮ್ಕಿ ಭೂಮಿ ಎಂಬ ವಿಚಾರವೇ ಇಲ್ಲ. ಆರ್‌ಟಿಸಿಯಲ್ಲಿ ಕುಮ್ಕಿ ಎಂದು ನಮೂದು ಮಾಡುವ ಮೂಲಕ ಕೃಷಿಕರ ಭೂಮಿಯನ್ನು ಕಸಿಯುವ ಕೆಲಸವಾಗಿದೆ. ಸರಕರ ಪ್ರತ್ಯೇಕ ಕಾನೂನು ಜಾರಿ ಮಾಡಿ ಕುಮ್ಕಿ ಭೂಮಿಯನ್ನು ಅಕ್ರಮ ಸಕ್ರಮದಲ್ಲಿ ಕೃಷಿಕರಿಗೆ ಅಥವಾ ರೈತರಿಗೆ ಮಂಜೂರು ಮಾಡಿಸುವಲ್ಲಿ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.
ಬಂಟ, ಬಿಲ್ಲವ, ಬ್ಯಾರಿ ಅಕಾಡೆಮಿ ಸ್ಥಾಪನೆಯಾಗಲಿ:
ಜಿಲ್ಲೆಯ ಪ್ರಮುಖ ಸಮುದಾಯವಾದ ಬಂಟ, ಬಿಲ್ಲವ ಮತ್ತು ಬ್ಯಾರಿ ಸಮುದಾಯದ ಅಕಾಡೆಮಿಯನ್ನು ಸರಕಾರ ಸ್ಥಾಪನೆ ಮಾಡಬೇಕು ಎಂದು ಶಾಸಕರು ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದರು. ಒಟ್ಟಿನಲ್ಲಿ ಕರಾವಳಿ ಜಿಲ್ಲೆ ಸೇರಿದಂತೆ ತನ್ನ ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ದಿ ಕಾರ್ಯಗಳ ಬಗ್ಗೆ ಸದನದಲ್ಲಿ ಶಾಸಕ ಅಶೋಕ್ ರೈ ಅವರು ಸಮಗ್ರವಾಗಿ ಮಂಡಿಸಿದರು.