ಪುತ್ತೂರು: ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಅವರನ್ನು ಭೇಟಿಯಾದ ಶಾಸಕ ಅಶೋಕ್ ರೈ ಅವರು ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಮುಂಬರುವ ಬಜೆಟ್‌ನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿ ಅನುದಾನ ಮತ್ತು ವಿವಿಧ ಯೋಜನೆಗಳಿಗೆ ಅನುದಾನವನ್ನು ಮೀಸಲಿಡುವಂತೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಪುತ್ತೂರಿನ ಪ್ರಮುಖ ಬೇಡಿಕೆಯಾದ ಮೆಡಿಕಲ್ ಕಾಲೇಜು ಸೇರಿದಂತೆ ಕೆಲವೊಂದು ಪ್ರಮುಖ ವಿಚಾರಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಅರ್ದ ತಾಸು ಮಾತುಕತೆ ನಡೆಸಿದ್ದಾರೆ. ಶಾಸಕ ಅಶೋಕ್ ರೈ ಅವರ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿಗಳು ಭರವಸೆಯನ್ನು ನೀಡಿದ್ದಾರೆ.
ಸಚಿವ ಮಹದೇವಪ್ಪ ಭೇಟಿ
ವಿಟ್ಲದಲ್ಲಿ ಈಗಾಗಲೇ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗವನ್ನುಯ ಗುರುತಿಸಲಾಗಿದೆ. ಇಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಆಗಬೇಕಿದೆ. ಕಳೆದ ಎರಡು ದಿನಗಳ ಹಿಂದೆ ಪಾದಯಾತ್ರೆ ನಡೆಸಿದ ದಲಿತ್‌ಸೇವಾ ಸಮಿತಿ ಸಂಘಟನೆಯವರು ತನ್ನ ಕಚೇರಿಗೆ ಬಂದು ಮನವಿ ಮಾಡಿದ್ದು ಅಂಬೇಡ್ಕರ್ ಭವನಕ್ಕೆ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದು ವಿಳಂಬವಾದಲ್ಲಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಅವರಿಗೆ ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ವಿಟ್ಲ ಅಂಬೇಡ್ಕರ್ ಭವನಕ್ಕೆ ಕೂಡಲೇ ೨ ಕೋಟಿ ರೂ ಅನುದಾನವನ್ನು ಬಿಡುಗಡೆಮಾಡುವಂತೆ ಸಚಿವರಲ್ಲಿ ಮನವಿ ಮಾಡಿದ್ದು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ಬಹುಗ್ರಾಮ ಕುಡಿಯುವ ನೀರು
ಅಧಿಕಾರಿ ಜೊತೆ ಚರ್ಚೆ
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಾರಂಭಗೊಂಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾರ್ಯವೈಖರಿಯ ಬಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಇಲಾಖೆಯ ಮುಖ್ಯ ಅಧೀಕ್ಷಕರಾದ ಇಜಾಸ್ ಹುಸೇನ್ ರವರ ಜೊತೆ ಶಾಸಕರು ಮಾತುಕತೆ ನಡೆಸಿದರು. ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದ್ದು ಒಂದು ಹಂತದ ಅನುದಾನವೂ ಬಿಡುಗಡೆಯಗಿದೆ. ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಹೊಸ ಕೊಳವೆ ಬಾವಿ ತೆಗೆಯಲು ಕ್ಷೇತ್ರಕ್ಕೆ ಒಂದೂವರೆ ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ ಅಧಿಕಾರಿಯ ಜೊತೆ ಶಾಸಕರು ಚರ್ಚೆ ನಡೆಸಿದ್ದಾರೆ.
—
ಗುರುವಾರದಂದು ಸಿ ಎಂ ಸಿದ್ದರಾಮಯ್ಯ , ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಹಾಗೂ ಕೆಲ ಅಧಿಕಾರಿಗಳನ್ನು ಭೇಟಿಯಗಿ ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಮಾತುಕತೆ ನಡೆಸಿದ್ದೇನೆ. ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನವನ್ನು ನೀಡುವ ಬಗ್ಗೆ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿದ್ದು , ವಿಟ್ಲದ ಅಂಬೇಡ್ಕರ್ ಭವನಕ್ಕೆ ೨ ಕೋಟಿ ಅನುದಾನವನ್ನು ನೀಡುವಂತೆ ಮನವಿ ಮಾಡಿದ್ದೇನೆ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಬಗ್ಗೆ ಅಧಿಕಾರಿ ಬಳಿ ಚರ್ಚೆ ನಡೆಸಿದ್ದೇನೆ. ಚರ್ಚೆಗಳು ಸಕಾರಾತ್ಮಕವಾಗಿ ನಡೆದಿದೆ.- ಅಶೋಕ್ ರೈ , ಶಾಸಕರು, ಪುತ್ತೂರು