ಮೂಡಲಗಿ- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಗುರುವಾರ ಸಂಜೆ ಇಲ್ಲಿನ
ಪುರಸಭೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಡಿಎಸ್ಎಂಟಿ ಯೋಜನೆಯಡಿ ವಾಣಿಜ್ಯ ಮಳಿಗೆಯನ್ನು ಇಲ್ಲಿಯ ಬಾಜಿ ಮಾರ್ಕೆಟ್ ಬಳಿ ನಿರ್ಮಿಸಲಿದ್ದು, ಇದು ಬಹು ಮಹಡಿ ಕಟ್ಟಡವನ್ನು ಹೊಂದಿರಲಿದೆ ಎಂದು ಅವರು ತಿಳಿಸಿದರು.
ನೆಲ ಮಾಳಿಗೆಯಲ್ಲಿ
(ಬೆಸ್ ಮೆಂಟ್) ವಾಹನಗಳ ಪಾರ್ಕಿಂಗ್, ನೆಲ ಮಹಡಿಯಲ್ಲಿ 51 ಮತ್ತು ಮೊದಲ ಮಹಡಿಯಲ್ಲಿ 17 ಅಂಗಡಿಗಳು ಸೇರಿದಂತೆ ಒಟ್ಟು 68 ಅಂಗಡಿಗಳ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಮೂಡಲಗಿ ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ. ಅನೇಕ ಹೊಸ ಹೊಸ ಯೋಜನೆಗಳನ್ನು ಕಾರ್ಯಗತ ಮಾಡಲಾಗುತ್ತಿದೆ. ಆದರೆ ಈಗಿರುವ ಕಾಂಗ್ರೆಸ್ ಸರ್ಕಾರವು ಯಾವುದೇ ತೆರನಾದ ಅನುದಾನ ನೀಡುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳು ನಿಧಾನ ಗತಿಯಲ್ಲಿ ನಡೆಯುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
15 ನೇ ಹಣಕಾಸು ಯೋಜನೆಯಲ್ಲಿ 1.13 ಕೋಟಿ ರೂ ವೆಚ್ಚದ ಕಾಮಗಾರಿಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಇದರಲ್ಲಿ ಪಟ್ಟಣದಲ್ಲಿರುವ ರಸ್ತೆಗಳು, ಒಳಚರಂಡಿ ನಿರ್ಮಾಣ ಮತ್ತು ಘನತ್ಯಾಜ್ಯ ವಿಲೇವಾರಿ ಘಟಕದ ಕಂಪೌಂಡ್ ನಿರ್ಮಾಣ ಸೇರಿದೆ. ಕುಡಿಯುವ ನೀರಿಗಾಗಿ 49.80 ಲಕ್ಷ ರೂಪಾಯಿಗಳ ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.
ರಸ್ತೆ ಅಭಿವೃದ್ಧಿಗಾಗಿ 65.20 ಲಕ್ಷ ರೂ ಮೊತ್ತದ ಟೆಂಡರ್ ಕರೆಯಲಾಗಿದೆ.ಐಎಸ್ ಡಬ್ಲ್ಯೂಎಂ ಘಟಕದ ಯೋಜನೆಗಾಗಿ 1.02 ಕೋಟಿ ರೂ ಗಳ ಟೆಂಡರ್ ಕರೆಯಲಾಗಿದೆ ಎಂದು ಅವರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪುರಸಭೆ ಸದಸ್ಯರೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಕುರಿತಂತೆ ಸಭೆಯನ್ನು ನಡೆಸಿದರು.
ಪುರಸಭೆಯ ಎಲ್ಲ ಸದಸ್ಯರು, ಮುಖಂಡರು, ಮುಖ್ಯಾಧಿಕಾರಿ ತುಕಾರಾಮ ಮಾದರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಪುರಸಭೆಯಿಂದ ಸತ್ಕರಿಸಲಾಯಿತು.