ಬೆಳಗಾವಿ : ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಅದ್ದೂರಿಯಾಗಿ ಶತಮಾನೋತ್ಸವ ಆಚರಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕ‌ರ್ ಅವರು ಬೆಳಗಾವಿಗೆ ಬಂದು ಹೋಗಿ 100 ವರ್ಷಗಳು ಸಂದಿವೆ. ಅದರ ಶತಮಾನೋತ್ಸವವನ್ನೂ ಸರ್ಕಾರ ಆಚರಿಸಬೇಕು ಎಂದು ಶಾಸಕಿ ಶಶಿಕಲಾ ಜೊಲ್ಲೆ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಚಿಕ್ಕೋಡಿ ಕೋರ್ಟಿನಲ್ಲಿ ವಾದ ಮಂಡನೆಗಾಗಿ ಅಂಬೇಡ್ಕ‌ರ್ ಅವರು ಬೆಳಗಾವಿ ನಗರಕ್ಕೆ ಬಂದು ಎರಡು ದಿನ ತಂಗಿದ್ದರು. ಈ ಸಂದರ್ಭಕ್ಕೆ ಇದೇ ಡಿ.26ರಂದು 100 ವರ್ಷ ತುಂಬುತ್ತವೆ. ಹಾಗಾಗಿ ಶತಮಾನೋತ್ಸವ ಆಚರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.