ಬೆಳಗಾವಿ : ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಶಾಸಕರ ಭವನ ನಿರ್ಮಾಣ ಸಂಬಂಧ ಕೆಲವು ಯೋಜನೆ ಸಿದ್ಧಪಡಿಸಿದ್ದೇವೆ. ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚೆಯೂ ಆಗಿದೆ. ವಿಧಾನ ಪರಿಷತ್ ಸಭಾಪತಿ ಮತ್ತು ನಾನು ಸೇರಿಕೊಂಡು, ಶಾಸಕರ ಭವನಕ್ಕೆ ಅಂತಿಮ ರೂಪುರೇಷೆ ತಯಾರಿಸುತ್ತೇವೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಪತ್ರಕರ್ತರ ಜೊತೆ ಮಾತನಾಡಿದ ಅವರು ಈ ಯೋಜನೆ ಸಿದ್ಧವಾಗಿದ್ದು ರೂಪುರೇಷೆ ತಯಾರಿಸಲಿದ್ದೇವೆ ಎಂದು ಹೇಳಿದರು.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವರು ದೇಶದ್ರೋಹಿಗಳು. ಇಂಥ ಕೃತ್ಯ ಮಾಡಿದವರು, ಘಟನೆ ಹಿಂದೆ ಸಂಚು ರೂಪಿಸಿದವರನ್ನು ಮಟ್ಟ ಹಾಕಬೇಕು. ನಿರ್ಭಯ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಬಹುದು. ಜನರು ನೆಮ್ಮದಿಯಿಂದ ಬದುಕು ಸಾಗಿಸಬಹುದು. ಶಾಂತಿಯುತ ರಾಜ್ಯ ಕೆಡಿಸಲು ಯತ್ನಿಸಿದವರನ್ನು ಮಟ್ಟಹಾಕಲು ಸರ್ಕಾರ ಕ್ರಮ ವಹಿಸಿದೆ. ಇದರ ಹಿಂದೆ ಯಾರ ಕೈವಾಡವಿದೆ ಅವರ ಉದ್ದೇಶವೇನು ಎಂಬುದು ತಿಳಿಯಬೇಕಿದೆ. ಮುಂದೆ ಇಂಥ ಕೃತ್ಯ ಮಾಡಲು ಬೇರೆಯವರೂ ಭಯಪಡುವಂತೆ, ಆರೋಪಿಗೆ ಶಿಕ್ಷೆ ವಿಧಿಸಬೇಕಿದೆ. ಮನುಷ್ಯತ್ವ ಹಾಗೂ ಕರುಣೆ ಇಲ್ಲದವರನ್ನು ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಯಾರೂ ರಾಜಕಾರಣ ಮಾಡಬಾರದು. ನಾವೆಲ್ಲ ಒಗ್ಗಟ್ಟಿನಿಂದ ಇರಬೇಕು. ನಮ್ಮಲ್ಲೇ ಭಿನ್ನಾಭಿಪ್ರಾಯ ಮೂಡಿದರೆ ದುಷ್ಕರ್ಮಿಗಳು ಅದರ ಲಾಭ ಪಡೆಯುತ್ತಾರೆ. ಕರ್ನಾಟಕದಲ್ಲಿ ಎಲ್ಲರೂ ಸಹೋದರರಂತೆ ಒಂದಾಗಿ ಬಾಳ್ವೆ ನಡೆಸುತ್ತಿದ್ದೇವೆ. ನಮ್ಮನ್ನು ಬೇರ್ಪಡಿಸಲು ಯಾರಿಗೂ ಅವಕಾಶ ಕೊಡಬಾರದು ಎಂದು ಹೇಳಿದರು.