ರಾಯಚೂರು :
ದೇವದುರ್ಗ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕಿ ಕರೆಮ್ಮ ನಾಯಕ್ ಅವರ ಪುತ್ರ ಸಂತೋಷ್, ಪಿಎ ಇಲಿಯಾಸ್ ಸೇರಿದಂತೆ ಎಂಟು ಜನರು ದೇವದುರ್ಗ ಪೊಲೀಸ್ ಠಾಣೆಯ ಕರ್ತವ್ಯನಿರತ ಕಾನ್ಸ್‌ಟೇಬಲ್‌ ಹನುಮಂತರಾಯ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ಹಲ್ಲೆ ಮಾಡಿದ ಬಳಿಕ, ರಾಜಕೀಯ ಪ್ರಭಾವ ಬಳಸಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಹಲ್ಲೆಗೊಳಗಾದ ಕಾನ್ಸ್‌ಟೇಬಲ್ ಹನುಮಂತರಾಯ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವದುರ್ಗ ಪೊಲೀಸ್‌ ಠಾಣಾ
ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಾನ್ಸ್‌ಟೇಬಲ್ ಹನುಮಂತರಾಯ ಅವರು ರವಿವಾರ (ಫೆ.11) ರಂದು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟ‌ರ್ ಅನ್ನು ತಡೆದಿದ್ದರು. ಟ್ರ್ಯಾಕ್ಟರ್‌ ತಡೆಹಿಡಿದ ವಿಚಾರಕ್ಕೆ ಶಾಸಕಿ ಪುತ್ರ ಸಂತೋಷ್ ಕಾನ್ಸ್‌ಟೇಬಲ್ ಹನುಮಂತರಾಯ ಅವರಿಗೆ ಕರೆ ಮಾಡಿ ಟ್ರ್ಯಾಕ್ಟ‌ರ್ ಬಿಡುವಂತೆ ಹೇಳಿದ್ದಾರೆ.

ಒತ್ತಡಕ್ಕೆ ಮಣಿಯದ ಕಾನ್ಸ್ ಟೇಬಲ್ ಹನುಮಂತರಾಯ ಅವರು ಟ್ರ್ಯಾಕ್ಟರ್‌ ಅನ್ನು ಪೊಲೀಸ್‌ ಠಾಣೆಗೆ ತಂದು ಪರಿಶೀಲನೆ ನಡೆಸಿದ್ದಾರೆ. ಇದರಿಂದ ಆಕ್ರೋಶಗೊಂಡ ಶಾಸಕಿ ಪುತ್ರ ಸಂತೋಷ್ ಕಾನ್ಸ್‌ಟೇಬಲ್ ಹನುಮಂತರಾಯ ಅವರನ್ನು ದೇವದುರ್ಗ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಶಾಸಕಿ ಕರೆಮ್ಮ ನಾಯಕ್ ಪುತ್ರ ಸಂತೋಷ್ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ಎ1 ಸಂತೋಷ್, ಎ5 ಶಾಸಕಿ ಪಿಎ ಇಲಿಯಾಸ್ ಎಂದು ಉಲ್ಲೇಖಿಸಲಾಗಿದೆ.