ದೆಹಲಿ : ಕೇಂದ್ರ ಸರ್ಕಾರವು ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್‌ಗಳಿಗೆ ನೀಡುತ್ತಿರುವ 300 ರೂಪಾಯಿ ಸಬ್ಸಿಡಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಣೆ ಮಾಡಿದೆ.
ಈಗ ಸಬ್ಸಿಡಿಯನ್ನು ಮತ್ತೊಂದು ವರ್ಷ ವಿಸ್ತರಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ದೇಶದ ಗೃಹಿಣಿಯರಿಗೆ ಕೇಂದ್ರ ಸರ್ಕಾರ ಈ ಗುಡ್ ನ್ಯೂಸ್ ನೀಡಿದೆ. ಉಜ್ವಲ ಯೋಜನೆ ಅಡಿಯಲ್ಲಿ ನೀಡುತ್ತಿರುವ ಅಡುಗೆ ಅನಿಲ ಸಿಲಿಂಡರ್‌ಗೆ ನೀಡುವ 300 ರೂಪಾಯಿ ಸಬ್ಸಿಡಿಯನ್ನು 2024-25ನೇ ಹಣಕಾಸು ವರ್ಷದವರೆಗೆ ವಿಸ್ತರಣೆ ಮಾಡಿದೆ. ಇದರೊಂದಿಗೆ ಉಜ್ವಲ ಯೋಜನೆ ಅಡಿಯಲ್ಲಿ 14.2 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್ ಖರೀದಿಸುವವರಿಗೆ ಅನುಕೂಲವಾಗಲಿದೆ. ದೇಶದ 10 ಕೋಟಿ ಗೃಹಿಣಿಯರು ಸಬ್ಸಿಡಿಯ ಲಾಭ ಪಡೆಯಲಿದ್ದಾರೆ.
2023ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರವು ಎಲ್‌ಪಿಜಿ ಸಬ್ಸಿಡಿಯನ್ನು 200 ರೂಪಾಯಿಂದ 300 ರೂಪಾಯಿಗೆ ಏರಿಕೆ ಮಾಡಿತ್ತು. 2023-24ನೇ ಸಾಲಿನ ಹಣಕಾಸು ವರ್ಷದ ಅಂತ್ಯದವರೆಗೆ 300 ರೂ. ಸಬ್ಸಿಡಿ ನೀಡುವುದಾಗಿ ಘೋಷಿಸಿತ್ತು. 2023-24ನೇ ಸಾಲಿನ ಹಣಕಾಸು ವರ್ಷವು ಮಾರ್ಚ್ 31ಕ್ಕೆ ಮುಗಿಯುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮತ್ತೊಂದು ಹಣಕಾಸು ಸಾಲಿಗೆ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್‌ಗೆ ನೀಡುವ ಸಬ್ಸಿಡಿಯನ್ನು ವಿಸ್ತರಣೆ ಮಾಡಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 300 ರೂಪಾಯಿಗಳ ಸಬ್ಸಿಡಿಯನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಪರಿಷ್ಕೃತ ದರ ಅನ್ವಯ ಈಗ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ 603 ರೂ.ಗೆ ದೊರೆಯಲಿದೆ.