ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಬೆಳಗಾವಿ ಜಿಲ್ಲೆಯ ಜನರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಪ್ರಸ್ತುತ ಬೆಳಗಾವಿಯಲ್ಲಿ ಇರುವ 50 ಹಾಸಿಗೆಯ ಹಳೆಯ ರಾಜ್ಯ ವಿಮಾ (ಇ.ಎಸ್.ಆಯ್.ಎಸ್) ಆಸ್ಪತ್ರೆಯನ್ನು ಕೆಡವಿ 100 ಹಾಸಿಗೆಯ ಕೇಂದ್ರ ಸರ್ಕಾರದ ಹೊಸ ವಿಮಾ (ಇ.ಎಸ್.ಆಯ್.ಸಿ) ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. ಈ ಯೋಜನೆಯ ನಿರ್ಮಾಣ ಕಾಮಗಾರಿಯ ವೆಚ್ಚ ಸುಮಾರು 152.20 ಕೋಟಿಯಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.
ಬುಧವಾರ ಮಾ-6 ರಂದು ಪತ್ರಿಕಾ ಹೇಳಿಕೆ ನೀಡಿದ ಈರಣ್ಣ ಕಡಾಡಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಅಂದಾಜು 1 ಲಕ್ಷ 20 ಸಾವಿರ ವಿಮಾ ಸೌಲಭ್ಯ ಹೊಂದಿರುವ ನೊಂದಾಯಿತ ಕಾರ್ಮಿಕರಿದ್ದು, ಅವರ ಕುಟುಂಬ ಸದಸ್ಯರು ಸೇರಿದಂತೆ ಸುಮಾರು 4 ಲಕ್ಷ ಜನರಿಗೆ ಇದರ ಲಾಭವಾಗಲಿದೆ. ಕಾರ್ಮಿಕರಿಗೆ ಆರೋಗ್ಯ ಮೂಲಸೌಕರ್ಯ ಹೆಚ್ಚಿಸುವ ಮತ್ತು ಸುಧಾರಿತ ವೈದ್ಯಕೀಯ ಸೌಲಭ್ಯಗಳ ಅನುಕೂಲಕ್ಕಾಗಿ ಸತತ ಎರಡು ವರ್ಷಗಳ ನಿರಂತರ ಪ್ರಯತ್ನದಿಂದಾಗಿ ಜಿಲ್ಲೆಯಲ್ಲಿ ಹೊಸ 100 ಹಾಸಿಗೆ ಇ.ಎಸ್.ಐ.ಸಿ. ಆಸ್ಪತ್ರೆ ನಿರ್ಮಿಸಲು ಕೇಂದ್ರ ಸರ್ಕಾರದಿಂದ ಮಂಜೂರಾತಿ ಪಡೆಯಲಾಗಿತ್ತು, ಈಗ ಟೆಂಡರ್ ಕರೆಯುವ ಮೂಲಕ ಕಾರ್ಯ ಪ್ರಾರಂಭಿಸುತ್ತಿರುವುದು ಸ್ವಾಗತಾರ್ಹ ಎಂದರು.
5 ಮಾರ್ಚ್ 2024, ಆನ್‌ಲೈನ್ ಟೆಂಡರ್ ಸಲ್ಲಿಕೆಗೆ ಪ್ರಾರಂಭವಾಗಿ ಅಂತಿಮ ದಿನಾಂಕ 3 ಏಪ್ರಿಲ್ 2024, ಸಂಜೆ 5:00 ಗಂಟೆಯವರೆಗೆ ಇರಲಿದೆ. ಈ ಯೋಜನೆಯಡಿ ಹಳೆಯ ಕಟ್ಟಡ ಕೆಡುವಿ, 100 ಹಾಸಿಗೆಗಳ ಆಸ್ಪತ್ರೆ ಮತ್ತು ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣವಾಗಲಿದೆ. ಇದು ಬೆಳಗಾವಿಯಲ್ಲಿ ಆರೋಗ್ಯ ಮೂಲ ಸೌಕರ್ಯವನ್ನು ಹೆಚ್ಚಿಸುವಲ್ಲಿ ಮಹತ್ವವನ್ನು ಹೊಂದಿದೆ. ಕಾರ್ಮಿಕ ಹಾಗೂ ಅವರ ಕುಟುಂಬದ ಸದಸ್ಯರುಗಳಿಗೆ ಆರೋಗ್ಯ ಸೇವೆ ನೀಡಲು ಸಹಕಾರಿಯಾಗಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಕಾರ್ಮಿಕ ಸಚಿವ ಭೂಫೇಂದ್ರ ಯಾದವ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.