ನವದೆಹಲಿ : ರಾಜಸ್ಥಾನದ ಬೆಟ್ಟಿಂಗ್‌ ಮಾರ್ಕೆಟ್‌ ದುನಿಯಾ ಮತ್ತು ನಿಖರ ಭವಿಷ್ಯಕ್ಕೆ ಹೆಸರಾಗಿರುವ ಲೋಡಿ ಸಟ್ಟಾ ಬಜಾರ್‌, ಆರನೇ ಹಂತದ ಚುನಾವಣೆಯ ನಂತರ ಯಾರಿಗೆ ಎಷ್ಟು ಸ್ಥಾನ ಎನ್ನುವ ವಿಚಾರದಲ್ಲಿ ಮತ್ತೊಂದು ಭವಿಷ್ಯವನ್ನು ನುಡಿದಿದೆ. ಬಿಜೆಪಿ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಸಟ್ಟಾ ಬಜಾರ್‌ ಹೇಳಿದೆ.

ರಾಜಸ್ಥಾನದ ಜೋಧಪುರದಿಂದ 160 ಕಿಮೀ ದೂರದಲ್ಲಿರುವ ಲೋಡಿ ಎಂಬಲ್ಲಿ ಕೇಂದ್ರೆಕೃತವಾಗಿ ನಡೆಯುವ ಈ ಓಪನ್‌ ಬೆಟ್ಟಿಂಗ್‌ ಜಗತ್ತಿನಲ್ಲಿ ಬರೀ ಚುನಾವಣೆಗೆ ಸಂಬಂಧಿಸಿದಂತೆ ಮಾತ್ರ ಬಾಜಿ ನಡೆಯುವುದಿಲ್ಲ. ಕ್ರಿಕೆಟ್‌‍, ರಾಜಕೀಯ ಸೇರಿದಂತೆ ನಾನಾ ವಿಚಾರಗಳ ಮೇಲೆ ಇಲ್ಲಿ ಬೆಟ್ಟಿಂಗ್‌ ನಡೆಯುತ್ತದೆ.

ಆರನೇ ಹಂತದ ಚುನಾವಣೆ ಮುಗಿದ ನಂತರ ಬಾಜಿ ಹೂಡುವವರು ಬಿಜೆಪಿಗೆ ಎಷ್ಟು ಸ್ಥಾನ ಸಿಗಬಹುದು ಎನ್ನುವುದರ ಬಗ್ಗೆ ಉತ್ಸುಕರಾಗಿದ್ದಾರೆ. 400 ಗಡಿಯನ್ನು ದಾಟುತ್ತೋ, ಇಲ್ಲವೋ ಎನ್ನುವುದರ ಮೇಲೆ ಬೆಟ್ಟಿಂಗ್‌ ಜೋರಾಗಿ ನಡೆಯುತ್ತಿದೆ.

ಲೋಡಿ ಸಟ್ಟಾ ಬರ್ಜಾ ಪ್ರಕಾರ ಬಿಜೆಪಿಗೆ ಏಕಾಂಗಿಯಾಗಿ ಅಥವಾ ಒಟ್ಟಾರೆಯಾಗಿ ಎನ್ಡಿಎ ಮೈತ್ರಿಕೂಟಕ್ಕೆ 400 ಸ್ಥಾನದ ಮೇಲೆ ಗೆಲ್ಲುವ ಯಾವುದೇ ಸಾಧ್ಯತೆಯಿಲ್ಲ. ಕೆಲವು ದಿನಗಳ ಹಿಂದೆ, ಎಷ್ಟು ಸ್ಥಾನ ಗೆಲ್ಲಬಹುದು ಎಂದು ಸಟ್ಟಾ ಬಜಾರ್‌ ಹೇಳಿತ್ತೋ, ಅದಕ್ಕಿಂತ ಕಡಿಮೆ ಸ್ಥಾನ ಸಿಗಲಿದೆ ಎಂದು ಆರನೇ ಹಂತದ ಚುನಾವಣೆಯ ನಂತರ ಭವಿಷ್ಯ ನುಡಿದಿದೆ.

543 ಸೀಟುಗಳ ಪೈಕಿ ಬಿಜೆಪಿ ಏಕಾಂಗಿಯಾಗಿ 290 ಸ್ಥಾನವನ್ನು ಗೆಲ್ಲಬಹುದು ಎಂದು ಹೇಳಿದೆ. ಇದು, ಕೆಲವು ದಿನಗಳ ಹಿಂದೆ ನುಡಿದಿದ್ದ ಸಮೀಕ್ಷೆಯನ್ನು ಹೋಲಿಸಿದರೆ ಹತ್ತು ಸೀಟು ಕಡಿಮೆ. ಬಿಜೆಪಿಗೆ ಕ್ಲಿಯರ್‌ ಮೆಜಾರಿಟಿ ಸಿಗಲಿದೆ ಎಂದು ತನ್ನ ಬಾಜಿಯಲ್ಲಿ ಸಟ್ಟಾ ಬಜಾರ್‌ ಹೇಳಿದೆ.

ಒಟ್ಟಾರೆಯಾಗಿ ಬಿಜೆಪಿ ಮೈತ್ರಿಕೂಟಕ್ಕೆ 300 – 320 ಸ್ಥಾನ ಸಿಗಬಹುದು ಮತ್ತು ಬೆಟ್ಟಿಂಗ್‌ ಮಾರುಕಟ್ಟೆ ಬಿಜೆಪಿಗೆ 300 ಸ್ಥಾನ ಸಿಗಬಹುದು ಬಾಜಿ ಹೂಡುತ್ತಿದೆ ಎಂದು ಪ್ರಭುದಾಸ್‌‍ ಲೀಲಾರ್ಧ ಸಂಸ್ಥೆಯ ಮುಖ್ಯಸ್ಥ ಅಮನೀಶ್‌ ಅಗರವಾಲ್‌ ಹೇಳಿದ್ದಾರೆ.ಬಿಜೆಪಿಯು 2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ಮರುಕಳಿಸಲಿದೆ ಎಂದು ಸಟ್ಟಾ ಬಜಾರ್‌ ಬೆಟ್ಟಿಂಗ್‌ ಅನ್ನು ಉಲ್ಲೇಖಿಸಿ ಅರಿಹಂತ್‌ ಕ್ಯಾಪಿಟಲ್‌ ಸಂಸ್ಥೆಯ ಎಂಡಿ ಅರ್ಪಿತ್‌ ಜೈನ್‌ ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಲೋಡಿ ಸಟ್ಟಾ ಮಾರುಕಟ್ಟೆ ಮಾಡಿದ್ದ ಭವಿಷ್ಯ ನಿಜವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ನಿರಾಶಾದಾಯಕ ಫಲಿತಾಂಶ ಬರಲಿದೆ.40 – 42 ಸ್ಥಾನವನ್ನು ಮಾತ್ರ ಕಾಂಗ್ರೆಸ್‌‍ ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌‍ 52 ಸ್ಥಾನವನ್ನು ಗೆದ್ದಿತ್ತು. ಒಟ್ಟಾರೆಯಾಗಿ 2024ರ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಎಷ್ಟು ಸ್ಥಾನ ಗೆಲ್ಲಲಿದೆ ಎನ್ನುವುದನ್ನು ಸಟ್ಟಾ ಬಜಾರ್‌ ತನ್ನ ಲೇಟೆಸ್ಟ್‌ ಸಮೀಕ್ಷೆಯಲ್ಲಿ ಉಲ್ಲೇಖಿಸಿಲ್ಲ.