ದೆಹಲಿ : ಬಿಜೆಪಿ ನೇತೃತ್ವದ ಮೈತ್ರಿಕೂಟವು ಲೋಕಸಭೆಯಲ್ಲಿ ಬಹುಮತಕ್ಕೆ ಬೇಕಾದ 272 ಸ್ಥಾನಗಳನ್ನು ದಾಟಿದ್ದರೂ, ವಿಪಕ್ಷಗಳ ಇಂಡಿಯಾ ಮೈತ್ರಿಕೂಟವು ಏಕಪಕ್ಷೀಯವಾಗಿ ಇದ್ದಂತೆ ತೋರುತ್ತಿದ್ದ ಚುನಾವಣೆಯನ್ನು “ಕಾಂಟೆ ಕಿ ಟಕ್ಕರ್” ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ.

ಕಳೆದ ಎರಡು ಚುನಾವಣೆಗಳಿಗಿಂತ ಭಿನ್ನವಾಗಿ, ಜೂನ್ 4 ರ ಮಂಗಳವಾರದ ಮತ ಎಣಿಕೆಯ ಪ್ರಕಾರ, ಸಂಸತ್ತಿನ 543 ಸ್ಥಾನಗಳ ಲೋಕಸಭೆಯಲ್ಲಿ 272 ಬಹುಮತದ ಸಂಖ್ಯೆಯನ್ನು ದಾಟಲು ಮೋದಿ ಅವರ ಪಕ್ಷಕ್ಕೆ ಅದರ ಮೈತ್ರಿ ಪಕ್ಷಗಳ ಅಗತ್ಯವಿದೆ. ಆದರೆ ಅವರು ಬುಧವಾರ ನಡೆದ ಎನ್‌ಡಿಎ ಪಕ್ಷಗಳ ಸಭೆಯಲ್ಲಿ ಎನ್‌ಡಿಎ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದರು ಹಾಗೂ ಎಲ್ಲ ಎನ್‌ಡಿಎ ಪಕ್ಷಗಳು ಅವರಿಗೆ ಲಿಖಿತ ಬೆಂಬಲವನ್ನೂ ನೀಡಿವೆ. ಅವರು ಜೂನ್‌ ೮ರಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ನಿರೀಕ್ಷೆಯಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದರು, ಇತಿಹಾಸವನ್ನು ನಿರ್ಮಿಸಿದರು ಮತ್ತು 10 ವರ್ಷಗಳ ಕಾಲ ರಾಷ್ಟ್ರವನ್ನು ಮುನ್ನಡೆಸಿದ ಕೆಲವೇ ಪ್ರಧಾನಿಗಳಲ್ಲಿ ಒಬ್ಬರಾದರು.

ಭಾರತದ 14 ಪ್ರಧಾನ ಮಂತ್ರಿಗಳಲ್ಲಿ, 73 ವರ್ಷ ವಯಸ್ಸಿನ ಮೋದಿ ಪ್ರಸ್ತುತ ಮೂರನೇ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಭಾರತದಲ್ಲಿ ಹೆಚ್ಚಿನ ಅವಧಿಗೆ ಪ್ರಧಾನಿ ಮಂತ್ರಿಯಾಗಿದ್ದ ಟಾಪ್‌ -5 ಪ್ರಧಾನಮಂತ್ರಿಗಳು:

ಜವಾಹರಲಾಲ್ ನೆಹರು (ಕಾಂಗ್ರೆಸ್)
ಅಧಿಕಾರಾವಧಿ: 1947-1964
ಅವಧಿ: 16 ವರ್ಷ, 286 ದಿನಗಳು
ಜವಾಹರಲಾಲ ನೆಹರು ಭಾರತದ ಮೊಟ್ಟಮೊದಲ ಮತ್ತು ದೀರ್ಘಾವಧಿಯ ಪ್ರಧಾನ ಮಂತ್ರಿಯಾಗಿದ್ದರು. ಅವರು 1947 ರಿಂದ 1964 ರಲ್ಲಿ ನಿಧನರಾಗುವ ವರೆಗೂ ದೇಶವನ್ನು ಮುನ್ನಡೆಸಿದರು ಮತ್ತು ಆಧುನಿಕ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನೆಹರೂ ಅವರು ದೊಡ್ಡ ಕಾರ್ಖಾನೆಗಳು ಮತ್ತು ಅಣೆಕಟ್ಟುಗಳು ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಿದರು. ವೈಜ್ಞಾನಿಕ ಶಿಕ್ಷಣವನ್ನು ಉತ್ತೇಜಿಸಿದರು. ಭಾರತವು ಅಲಿಪ್ತ ವಿದೇಶಾಂಗ ನೀತಿ ಅನುಸರಿಸುವಲ್ಲಿ ಅವರ ಕೊಡುಗೆ ಅಪಾರ.

ಇಂದಿರಾ ಗಾಂಧಿ (ಕಾಂಗ್ರೆಸ್)
ಅಧಿಕಾರಾವಧಿ: 1966-1977, 1980-1984
ಅವಧಿ: 15 ವರ್ಷ, 350 ದಿನಗಳು
ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ನಾಲ್ಕು ಅವಧಿಗಳಲ್ಲಿ ಸುಮಾರು 16 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಅವರ ಅವಧಿಯನ್ನು ಬ್ಯಾಂಕ್‌ಗಳ ರಾಷ್ಟ್ರೀಕರಣ, ಹಸಿರು ಕ್ರಾಂತಿ ಮತ್ತು ತುರ್ತು ಪರಿಸ್ಥಿತಿ (1975-1977) ಮುಂತಾದ ವಿದ್ಯಮಾನಗಳಿಂದ ಗುರುತಿಸಲಾಗಿದೆ. 1971 ರ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಅವರು ಭಾರತವನ್ನು ವಿಜಯದತ್ತ ಮುನ್ನಡೆಸಿದರು, ಇದು ಬಾಂಗ್ಲಾದೇಶದ ಉದಯಕ್ಕೆ ಕಾರಣವಾಯಿತು.

ನರೇಂದ್ರ ಮೋದಿ (ಬಿಜೆಪಿ)
ಅಧಿಕಾರಾವಧಿ: 2014-ಇಂದಿನವರೆಗೆ
ಅವಧಿ: 10 ವರ್ಷಗಳು, 21 ದಿನಗಳು
ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸತತ ಮೂರನೇ ಅವಧಿಗೆ ಪ್ರಧಾನಿಯಾಗುವ ಹಾದಿಯಲ್ಲಿದ್ದಾರೆ. ಅವರು ತಮ್ಮ ಸುಧಾರಣೆಗಳು ಮತ್ತು ಕ್ರಿಯಾತ್ಮಕ ವಿದೇಶಾಂಗ ನೀತಿಗಳ ಮೂಲಕ ಗುರುತಿಸಲ್ಪಟ್ಟಿದ್ದಾರೆ, ದೇಶ ಮತ್ತು ವಿದೇಶಗಳಲ್ಲಿ ಪ್ರಶಂಸೆಯನ್ನು ಗಳಿಸಿದ್ದಾರೆ. ಅವರ ಎರಡನೇ ಅವಧಿ (2019) ಆರ್ಥಿಕ ಪುನರುಜ್ಜೀವನ, ಮೂಲಸೌಕರ್ಯ ಮತ್ತು ಜಾಗತಿಕ ನೀತಿಗಳು ಹಾಗೂ ಸಂಬಂಧಗಳ ಮೇಲೆ ಕೇಂದ್ರೀಕರಿಸಿದೆ.

ಮನಮೋಹನ್ ಸಿಂಗ್ (ಕಾಂಗ್ರೆಸ್)
ಅಧಿಕಾರಾವಧಿ: 2004-2014
ಅವಧಿ: 10 ವರ್ಷ, 4 ದಿನಗಳು
ಅರ್ಥಶಾಸ್ತ್ರಜ್ಞರಾಗಿದ್ದ ಮನಮೋಹನ ಸಿಂಗ್ ಅವರು 10 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯಲು ಸಹಾಯ ಮಾಡಿದ ನಿರಂತರ ಆರ್ಥಿಕ ಸುಧಾರಣೆಗಳಿಗೆ ಅವರು ಹೆಸರುವಾಸಿಯಾಗಿದ್ದಾರೆ. ಸಿಂಗ್ ಅವರ ಸರ್ಕಾರವು ಶಿಕ್ಷಣ ಹಕ್ಕು ಕಾಯಿದೆಯಂತಹ ಪ್ರಮುಖ ಕಾನೂನುಗಳನ್ನು ಜಾರಿಗೆ ತಂದಿತು ಮತ್ತು ಭಾರತದಲ್ಲಿ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಸುಧಾರಿಸಲು ಕೆಲಸ ಮಾಡಿದೆ.
ಅಟಲ್ ಬಿಹಾರಿ ವಾಜಪೇಯಿ (ಬಿಜೆಪಿ)
ಅಧಿಕಾರಾವಧಿ: 1996, 1998-2004
ಅವಧಿ: 6 ವರ್ಷ 80 ದಿನಗಳು

ಅಟಲ್ ಬಿಹಾರಿ ವಾಜಪೇಯಿ ಅವರು ಮೂರು ಬಾರಿ ಪ್ರಧಾನಿಯಾಗಿದ್ದರು. 1998 ರಲ್ಲಿ ಪೋಖ್ರಾನ್ ಪರಮಾಣು ಶಕ್ತಿ ಪರೀಕ್ಷೆಗಳಿಗಾಗಿ ಅವರು ನೆನಪಿನಲ್ಲಿರುತ್ತಾರೆ, ಇದು ಭಾರತವನ್ನು ಮಾನ್ಯತೆ ಪಡೆದ ಪರಮಾಣು ಶಕ್ತಿಯನ್ನಾಗಿ ಮಾಡಿದೆ. ವಾಜಪೇಯಿ ಅವರು ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಸುಧಾರಿಸಲು ಕೆಲಸ ಮಾಡಿದರು ಮತ್ತು ಈಗ ನಾವು ನೋಡುತ್ತಿರುವ ಸುವರ್ಣ ಚತುಷ್ಪಥ ಹೆದ್ದಾರಿ ಜಾಲದಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪ್ರಾರಂಭಿಸಿ ಕೀರ್ತಿ ಅವರಿಗೆ ಸಲ್ಲುತ್ತದೆ.