ಕನ್ಯಾಕುಮಾರಿ: ಪ್ರಧಾನಿ ನರೇಂದ್ರ ಮೋದಿ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲಾ ಸ್ಮಾರಕದಲ್ಲಿ 45 ಗಂಟೆಗಳ ಧ್ಯಾನ ಆರಂಭಿಸಿದ್ದಾರೆ. ಧ್ಯಾನ ಮಂಟಪದಲ್ಲಿ ನರೇಂದ್ರ ಮೋದಿ ಅವರು ಗುರುವಾರ (ಮೇ 30) ಸಂಜೆ 7 ಗಂಟೆ ಸುಮಾರಿಗೆ ಧ್ಯಾನ ಆರಂಭಿಸಿದ್ದು, ಜೂನ್‌ 1ರಂದು ಮುಗಿಸಲಿದ್ದಾರೆ.

ನರೇಂದ್ರ ಮೋದಿ ಅವರು ಕೇರಳ ರಾಜಧಾನಿ ತಿರುವನಂತಪುರಂನಿಂದ ಕನ್ಯಾಕುಮಾರಿಗೆ ಆಗಮಿಸಿದರು. ಧ್ಯಾನ ಆರಂಭಿಸುವ ಮೊದಲು ಅವರು ಭಗವತಿ ಅಮ್ಮನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ಮೋದಿ ಅವರು ಧ್ಯಾನ ಆರಂಭಿಸಿದರು. ಮೋದಿ ಅವರು ಎರಡು ದಿನ ಧ್ಯಾನ ಮಾಡುವ ಹಿನ್ನೆಲೆಯಲ್ಲಿ ಸ್ಮಾರಕದ ಸುತ್ತಲೂ 2 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯ ಸಂಗಮದಲ್ಲಿರುವ ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯ ವವತುರೈ ಕಡಲತೀರದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಈ ದ್ವೀಪದ ಮೇಲೆ ಧ್ಯಾನ ಮಾಡುವಾಗ ಸ್ವಾಮಿ ವಿವೇಕಾನಂದರು ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದರು. ಭಾರತದಾದ್ಯಂತ ನಾಲ್ಕು ವರ್ಷಗಳ ಕಾಲ ಅಲೆದಾಡಿದ ಅವರು ದೈವಿಕ ಸ್ವಭಾವ, ಸತ್ಯ, ಶುದ್ಧತೆ, ಪ್ರಾಮಾಣಿಕತೆ, ಪರಿಶ್ರಮ, ಧೈರ್ಯ, ಶಕ್ತಿ ಮತ್ತು ಪ್ರೀತಿಯಲ್ಲಿ ನಂಬಿಕೆಯ ಇಡುವ ತತ್ತ್ವವನ್ನು ಸಾರಿದರು.