ನವದೆಹಲಿ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 293 ಸ್ಥಾನ ಗೆದ್ದು ಅಧಿಕಾರದ
ಭಾಗ್ಯ ಪಡೆದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದ ಕೇಂದ್ರ ಸರ್ಕಾರ ಭಾನುವಾರ ಅಸ್ತಿತ್ವಕ್ಕೆ ಬರಲಿದೆ.

ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿ ಮಂಡಲದ ಸದಸ್ಯರು ರಾತ್ರಿ 7.15ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವುದರೊಂದಿಗೆ ನೂತನ ಸರ್ಕಾರ ರಚನೆಯಾಗಲಿದೆ.

ಇದರೊಂದಿಗೆ ಪಂ. ಜವಾಹರಲಾಲ್ ನೆಹರು ಅವರ ನಂತರ ಸತತ 3ನೇ ಬಾರಿಗೆ ಪ್ರಧಾನಿ ಆದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಮೋದಿ ಭಾಜನರಾಗಲಿ ದ್ದಾರೆ. ಜತೆಗೆ ಸತತ 3 ಬಾರಿ ಪ್ರಧಾನಿಯಾದ ಏಕೈಕ ಕಾಂಗ್ರೆಸ್ಸೇತರ ನಾಯಕ ಎಂಬ ಕೀರ್ತಿಯನ್ನೂ ಮೋದಿ ಸಂಪಾದಿಸಲಿದ್ದಾರೆ.

ಈ ಹಿಂದೆ 2014 ಹಾಗೂ 2019ರಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆದಿತ್ತು. ಮಿತ್ರರ ಬಲವೂ ಸೇರಿ ಎನ್‌ಡಿಎ ಮೈತ್ರಿಕೂಟ ಸಂಖ್ಯಾಬಲ 300ರ ಗಡಿ ದಾಟಿತ್ತು. ಆದರೆ ಈ ಬಾರಿ ಬಿಜೆಪಿ 240 ಮತ್ತು ಎನ್‌ಡಿಎ ಮೈತ್ರಿಕೂಟ 293 ಸ್ಥಾನ ಪಡೆದಿವೆ. ಹೀಗಾಗಿ ಮುಂದಿನ 5 ವರ್ಷ ಮಿತ್ರ ಪಕ್ಷಗಳಾದ ಟಿಡಿಪಿ (16 ಸ್ಥಾನ), ಜೆಡಿಯು (12) ಸೇರಿದಂತೆ ಇತರೆ ಪಕ್ಷಗಳ ಬೆಂಬಲ ಅನಿವಾರ್ಯ. ಮೋದಿ ಅವರ ಪಾಲಿಗೆ ಇದು ಮೊದಲ ಸಮ್ಮಿಶ್ರ ಸರ್ಕಾರದ ಅನುಭವ.