ದೆಹಲಿ :
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಿಗೆ ತಿರುಗೇಟು ನೀಡಲು ಪ್ರತಿಪಕ್ಷಗಳು ಭಾರಿ ಪ್ರಯತ್ನ ನಡೆಸಿವೆ. ಈಗಿನಿಂದಲೇ ಈ ಬಗ್ಗೆ ಕಾರ್ಯತಂತ್ರ ಹೆಣೆಯುತ್ತಿವೆ. ಮೋದಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ವರ್ಚಸ್ಸು ಹೊಂದಿರುವ ವ್ಯಕ್ತಿಯನ್ನು ಕಣಕ್ಕೆ ಇಳಿಸಲು ಇಂಡಿಯಾ ಮೈತ್ರಿಕೂಟ ಸಿದ್ಧತೆಯಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ
ಅವರನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಲ್ಲಿ ಸೋಲಿಸಲು ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಭಾರಿ ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ಬಿಜೆಪಿಯ ಹಳೆಯ ಸ್ನೇಹಿತ ಅಥವಾ ಹೊಸ ಮುಖವನ್ನು ಕಣಕ್ಕಿಳಿಸಲು ಯೋಜಿಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಟಿವಿ ಚಾನೆಲ್ ಒಂದು ವರದಿ ಮಾಡಿದೆ.

ಮಂಗಳವಾರ ದೆಹಲಿಯಲ್ಲಿ ನಡೆದ ವಿಪಕ್ಷಗಳ ಸಭೆಯಲ್ಲಿ ಈ ಪ್ರಸ್ತಾವ ಇರಿಸಲಾಗಿದೆ ಎನ್ನಲಾಗಿದೆ.
ಈ ಬಾರಿ ಪ್ರಧಾನಿ ಮೋದಿ ಅವರನ್ನು ಸೋಲಿಸಲು ಬಿಜೆಪಿಯ ಮಾಜಿ ಮಿತ್ರರಾದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅಥವಾ ಹೊಸ ಮುಖವಾದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಕಣಕ್ಕಿಳಿಸುವ ಪ್ರಸ್ತಾವ ಇರಿಸಲಾಗಿದೆ ಎಂದು ವರದಿ ಹೇಳಿದೆ.

2004 ನ್ನು ಹೊರತುಪಡಿಸಿದರೆ 1991 ರಿಂದಲೂ ಇಲ್ಲಿ ಬಿಜೆಪಿ ಜಯ ಗಳಿಸುತ್ತಿದೆ.

ನಿತೀಶ ಈ ಹಿಂದೆ ಬಿಜೆಪಿಯ ಮೈತ್ರಿಕೂಟದಲ್ಲಿದ್ದರು. ಆದರೆ ಇದೀಗ ಇಂಡಿಯಾ ಮೈತ್ರಿಕೂಟವನ್ನು ತೊರೆದಿದ್ದು, ಪ್ರಧಾನಿ ಹುದ್ದೆಗೇರಲು ಅರ್ಹ ಅಭ್ಯರ್ಥಿ ಎಂದು ಗುರುತಿಸಿಕೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ಇದುವರೆಗೂ ಒಂದೂ ಚುನಾವಣೆಯನ್ನೂ ಎದುರಿಸಿಲ್ಲ. 2019ರಲ್ಲೇ ಇವರು ವಾರಾಣಸಿಯಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಡಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮೋದಿ ವಿರುದ್ಧ ಸ್ಪರ್ಧೆಯ ಪ್ರಶ್ನೆ ಬಂದಾಗೆಲ್ಲಾ ಪ್ರಿಯಾಂಕಾ ಸಕಾರಾತ್ಮಕವಾಗಿ ಉತ್ತರಿಸಿದ್ದಾರೆ. ಹೀಗಾಗಿ ಮೋದಿ ಅವರನ್ನು ಸೋಲಿಸಲು ಈ ಇಬ್ಬರು ನಾಯಕರಲ್ಲಿ ಒಬ್ಬರನ್ನು ಕಣಕ್ಕಿಳಿಸಲಾಗುತ್ತದೆ ಎನ್ನಲಾಗಿದೆ.