ಮೂಡಲಗಿ:
ಕೇಂದ್ರ ಸರ್ಕಾರ ರೈತರನ್ನು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಸಮರ್ಥರನ್ನಾಗಿ ಮಾಡಲು ವಿಶೇಷ ಒತ್ತು ನೀಡುತ್ತಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ರೈತರಿಗೆ ಬೀಜದಿಂದ ಮಾರುಕಟ್ಟೆವರೆಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಗುರುವಾರ ಡಿ.28 ರಂದು ನಾಗನೂರು ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಆಯೋಜಿಸಿದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮೂಲಕ ರೈತರನ್ನು ತಂತ್ರಜ್ಞಾನದೊಂದಿಗೆ ಸಂಪರ್ಕಿಸಲು ಕೇಂದ್ರ ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ. ಯಾತ್ರೆಯ ಸಮಯದಲ್ಲಿ, ಕೃಷಿ ಭೂಮಿಗಳಲ್ಲಿ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಸಿಂಪಡಿಸಲು ಡ್ರೋನ್‌ ಗಳ ಬಳಕೆಯ ಕುರಿತು ರೈತರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.

ಬೀದಿ ಬದಿ ವ್ಯಾಪಾರಿಗಳನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸುವ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಅಡಿಯಲ್ಲಿ ಸುಲಭವಾಗಿ ಸಾಲವನ್ನು ಪಡೆಯಬಹುದು. ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷದಲ್ಲಿ ಸಾಕಷ್ಟು ಜನಪರ ಯೋಜನೆಗಳನ್ನು ಸಮಾಜದ ಎಲ್ಲ ವರ್ಗದ ಜನತೆಗಾಗಿ ಜಾರಿಗೊಳಿಸಿದ್ದು ಅದನ್ನು ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಮೋದಿ ಗ್ಯಾರಂಟಿ ಗಾಡಿ ದೇಶದ ಮೂಲೆ ಮೂಲೆಗೂ ಸಂಚರಿಸುತ್ತಿದೆ ಎಂದರು.

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ತುಕ್ಕಾನಟ್ಟಿ ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಡಾ. ಡಿ.ಎ. ಮೇತ್ರಿ,ಕೆವಿಜಿ ಬ್ಯಾಂಕ್‌ ಮ್ಯಾನೇಜರ್‌ ಶ್ರೀಕಾಂತ, ಪ್ರಮುಖರಾದ ಧನಂಜಯ ಜೊಕಿ, ಪರಸಪ್ಪ ಬಬಲಿ, ಭೀಮಗೌಡ ಹೊಸಮನಿ, ರಾಜು ಸಕ್ರೆಪ್ಪಗೋಳ, ನಿಜಗುಣಿ ಹೊಸಮನಿ, ದುಂಡಪ್ಪ ನಂದಗಾಂವ, ಈರಪ್ಪ ಢವಳೇಶ್ವರ, ರಮೇಶ ಬೆಳಕೂಡ, ಶಂಕರ ದಳವಾಯಿ ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.