ನವದೆಹಲಿ: ನಿರೀಕ್ಷೆಗಿಂತ ತುಸು ಶೀಘ್ರವಾಗಿ ಮುಂಗಾರು ಪ್ರವೇಶಿಸಿದರೂ ಜೂನ್ ತಿಂಗಳಲ್ಲಿ ಇದುವರೆಗೆ ಸರಾಸರಿ ಗಿಂತ ಶೇ.20ರಷ್ಟು ಮಳೆ ಕೊರತೆಯಾಗಿದೆ ಎಂಬುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಜೂ.1ರಿಂದ 18ರೊಳಗೆ 64.5 ಮಿ.ಮೀ ಮಳೆಯಾಗುವ ಮೂಲಕ ಶೇ.20ರಷ್ಟು ಕೊರತೆಯಾಗಿದೆ. ಉತ್ತರ ಭಾರತದ ಹಲವೆಡೆ ಸರಾಸರಿಗಿಂತ ಕಡಿಮೆ ಮಳೆಯಾಗಿದೆ. ಆದರೆ ದಕ್ಷಿಣ ಭಾರತದಲ್ಲಿ 106.6 ಮಿ.ಮೀ ಮಳೆಯಾಗುವ ಮೂಲಕ ಶೇ.16ರಷ್ಟು ಅಧಿಕ ಮಳೆಯಾಗಿದೆ. ಆದರೂ ಮುಂದಿನ 3-4 ದಿನಗಳಲ್ಲಿ ಮಹಾರಾಷ್ಟ್ರ, ಛತ್ತೀಸ್‌ಗಢ, ಒಡಿಶಾ, ಆಂಧ್ರದ ಕರಾವಳಿ, ಬಂಗಾಳಕೊಲ್ಲಿಯ ವಾಯವ್ಯ, ಬಿಹಾರ ಮತ್ತು ಜಾರ್ಖಂಡದಲ್ಲಿ ಮುಂಗಾರು ಬಿರುಸುಗೊಳ್ಳುವ ಲಕ್ಷಣಗಳಿವೆ ಎಂದು ಹೇಳಿದೆ.