ಪುತ್ತೂರು: ದ ಕ ಜಿಲ್ಲೆ ದೈವ , ದೇವರುಗಳ ನೆಲೆಬೀಡಾಗಿದೆ, ಪ್ರತೀ ವರ್ಷವೂ ಇಲ್ಲಿ ನೇಮೋತ್ಸವ ನಡೆಯುತ್ತಿದೆ, ಜಿಲ್ಲೆಯಲ್ಲಿದ್ದ ಬಿಜೆಪಿ ಶಾಸಕರು ಈ ನೇಮೋತ್ಸವಕ್ಕೆ ಎಷ್ಟೋ ವರ್ಷದಿಂದ ಬಂದು ಹಿಂದುತ್ವದ ಭಾಷಣ ಮಾಡಿ ಹೋಗುತ್ತಿದ್ದಾರೆ ಆದರೆ ಅವರು ಒಂದೇ ಒಂದು ದೈವ, ದೇವಸ್ಥಾನದ ಭೂ ದಾಖಲೆಯನ್ನು ಸರಿಪಡಿಸಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ಆರೋಪಿಸಿದರು.

ಅವರು ನೆಹರೂನಗರದ ಪಡ್ಡಾಯೂರು ಶ್ರೀ ಅನ್ನಪೂಣೇಶ್ವರಿ ಭಜನಾಮಂದಿರದ ತಡೆಗೋಡೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಹಿಂದುತ್ವದ ಬಗ್ಗೆ ಭಾಷಣ ಮಾಡುವವರಿಗೆ ದೇವಸ್ಥಾನದ ಭೂ ದಾಖಲೆಯನ್ನು ಸರಿಮಾಡಬೇಕೆಂಬ ಆಸಕ್ತಿ ಉಂಟಾಗಲಿಲ್ಲ. ನಾವು ಏನೇ ಮಾಡಿದರೂ , ಮಾಡದಿದ್ದರೂ ನಮಗೆ ಜನ ವೋಟು ಹಾಕುತ್ತಾರೆ ಎಂಬ ವಿಶ್ವಾಸವಿದೆ. ಚುನಾವಣೆಯ ಸಂದರ್ಭದಲ್ಲಿ ಪ್ರಚೋಧನಕಾರಿ ಭಾಷಣ ಮಾಡಿ ಧರ್ಮ ಧರ್ಮಗಳ ಮಧ್ಯೆ ಅಪನಂಬಿಕೆ ಹುಟ್ಟಿಸಿ ಅದರ ಲಾಭ ಪಡೆದುಕೊಳ್ಳುವ ಬಿಜೆಪಿ ಹಿಂದೂ ಧರ್ಮದ ದೈವ , ದೇವಸ್ಥಾನಗಳನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಇದೆಲ್ಲಿಯ ಹಿಂದುತ್ವ ಎಂದು ಶಾಸಕರು ಪ್ರಶ್ನಿಸಿದರು.

ಧಾರ್ಮಿಕ ದತ್ತಿ ಇಲಾಖೆಯಲ್ಲಿ ದೈವ , ದೇವಸ್ಥಾನಗಳಿಗೆ ಕೊಡಬೆಕಾದ ಅನುದಾನ ಸಾಕಷ್ಟಿದೆ. ಆದರೆ ಆರ್ ಟಿ ಸಿ ಇಲ್ಲದ ಕಾರಣ ಅನುದಾನ ನೀಡಿದರೂ ಅದು ಇಲಾಖೆಯ ನಿಯಮಾನುಸಾರ ಸಮಿತಿಯವರಿಗೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಬಿಜೆಪಿಯೇ ನೇರ ಹೊಣೆಯಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ದೈವ ದೇವಸ್ಥಾನಗಳ ಅಭಿವೃದ್ದಿಗೆ ನೀಡಿದಸುಮಾರು ೮೦ ಲಕ್ಷ ಅನುದಾನ ಸೂಕ್ತ ದಾಖಲೆಯಿಲ್ಲದ ಕಾರಣಕ್ಕೆ ವಾಪಸ್ ಬಂದಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.

 

ಮೊದಲ ಅಧಿವೇಶನದಲ್ಲೇ ಸರಕಾರದ ಗಮನ ಸೆಳೆದಿದ್ದೆ

ನಾನು ಶಾಸಕನಾಗಿ ಮೊದಲ ಅಧಿವೇಶನದಲ್ಲೇ ದೈವ, ದೇವಸ್ಥಾನಗಳ ಈ ಸಮಸ್ಯೆಯ ಬಗ್ಗೆ ಸರಕಾರದ ಗಮನ ಸೆಳೆದಿದ್ದೆ. ಭೂ ದಾಖಲೆಯನ್ನು ಸಮಿತಿ ಹೆಸರಿಗೆ ಮಾಡಿಸಿಕೊಡುವಂತೆ ಸರಕಾರಕ್ಕೆ ಒತ್ತಡವನ್ನು ತಂದಿದ್ದೆ. ಈ ವಿಚಾರದಲ್ಲಿ ಪ್ರಕ್ರಿಯೆ ಮುಂದುವರೆಯುತ್ತಿದೆ. ಖಂಡಿತವಾಗಿಯೂ ಹೊಸ ಕಾನೂನನ್ನು ಜಾರಿ ಮಾಡಿ ಭೂ ದಾಖಲೆಯಿಲ್ಲದ ದೈವ, ದೇವಸ್ಥಾನಗಳ ಜಾಗವನ್ನು ಸಮಿತಿ ಹೆಸರಿನಲ್ಲಿ ಮಾಡಿಸಿಕೊಡುವಲ್ಲಿ ಪ್ರಯತ್ನವನ್ನು ಮುಂದುವರೆಸಿದ್ದೇನೆ. ಕರ್ನಾಟಕದಲ್ಲಿ ಹಿಂದುತ್ವ ಪ್ರತಿಪಾದನೆಯ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಈ ಕೆಲಸವನ್ನು ಮಾಡಬೇಕಿತ್ತು ಆದರೆ ಅವರು ಅದನ್ನು ಮಾಡಿಲ್ಲ, ಅವರಿಗೆ ಅದು ಬೇಕಾಗಿಯೂ ಇಲ್ಲ ಎಂದು ಹೇಳಿದರು.

 

ಭಾಷಣ ಮಾಡಿ ಪ್ರಯೋಜನವಿಲ್ಲ

ಭಾಷಣ ಮಾಡಿ ಹಿಂದೂ ಧರ್ಮ ಉದ್ದಾರಮಾಡಬಹುದು ಎಂದು ಬಿಜೆಪಿಯವರು ಬಲವಾಗಿ ನಂಬಿದ್ದಾರೆ. ಭಷಣ ಮಾಡಿದ್ರೆ ಖಂಡಿತವಾಗಿಯೂ ಏನೂ ಆಗಲ್ಲ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಇಷ್ಟು ವರ್ಷ ಬಿಜೆಪಿ ಹಿಂದೂಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದೇ ವಿನಾ ಹಿಂದೂಗಳು ಆರಾಧಿಸುವ ದೈವಗ, ದೇವಸ್ಥಾನಕ್ಕೆ ಒಂದು ಅಡಿಸ್ಥಳವನ್ನು ನೀಡಲು ಸಾಧ್ಯವಾಗದೇ ಇರುವುದು ಅತ್ಯಂತ ದುಖದ ವಿಚಾರವಾಗಿದೆ ಎಂದು ಹೇಳಿದರು. ಜನ ಇವರ ಕಪಟತನವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕರು ಹೇಳಿದರು.

ಕಾರ್ಯಕ್ರಮದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರಭಟ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಲೋಕೇಶ್ ಪಡ್ಡಾಯೂರು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.