ಹೊನ್ನಾವರ : ತಾಲೂಕಿನ ಮಂಕಿ ಬಳಿ ನಡೆದ ಭೀಕರ ಅಪಘಾತದಲ್ಲಿ ತಾಯಿ ಮತ್ತು ಮಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮಂಕಿಯ ಗುಳದಕೇರಿ ಬಳಿ‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಕೆಎಸ್ಸಾರ್ಟಿಸಿ ಬಸ್ಸಿನಡಿ ಸಿಲುಕಿ ತಾಯಿ ಮತ್ತು ಮಗಳು ಮೃತಪಟ್ಟಿದ್ದಾರೆ. ಮುರ್ಡೇಶ್ವರದ ಮಾವಳ್ಳಿಯ ನಾಡವರಕೇರಿ ನಿವಾಸಿ ಸವಿತಾ ರಾಜು ಆಚಾರಿ(೪೦) ಮತ್ತು ಮಗಳು ಅಂಕಿತಾ(೧೭) ಮೃತ ದುರ್ದೈವಿಗಳು.
ಮಂಕಿ ಜಾತ್ರೆಗೆಂದು ಸಾರಸ್ವತ ಕೇರಿಯ ತಾಯಿ ಮನೆಗೆ ಮಗಳೊಂದಿಗೆ ಸವಿತಾ ಬಂದಿದ್ದರು.ಜಾತ್ರೆ ಪೇಟೆಯಿಂದ ವಾಪಸ್ಸಾಗುವಾಗ ದುರ್ಘಟನೆ ನಡೆದಿದೆ. ತಾಯಿ-ಮಗಳು ಎಕ್ಟಿವಾ ಹೊಂಡಾ ದ್ವಿಚಕ್ರವಾಹನದಲ್ಲಿ ರಸ್ತೆ ದಾಟುತ್ತಿದ್ದಾಗ ಬಸ್ ಡಿಕ್ಕಿಹೊಡೆದಿದೆ. ಮಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿದ್ದ ಬಸ್ಸಿನಡಿ ಆಕ್ಟಿವಾ ಹೊಂಡಾ ಸಿಲುಕಿ ನಜ್ಜುಗುಜ್ಜಾಗಿದೆ. ದ್ವಿಚಕ್ರ ವಾಹನ ತಪ್ಪಿಸಲು ಹೋಗಿ ಬಸ್ ಡಿವೈಡರ್ ಹತ್ತಿದೆ.
ಗಂಭೀರ ಗಾಯಗೊಂಡ ತಾಯಿ-ಮಗಳನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಕೊನೆಯುಸಿರು ಎಳೆದಿದ್ದಾರೆ.
ಬಸ್ ಚಾಲಕ ಸವದತ್ತಿಯ ಫಕೀರಪ್ಪ ಬಸಪ್ಪ ವಿರುದ್ದ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.