ಬೆಳಗಾವಿ:ನಗರದ ಸ್ವಿಮ್ಮರ್ಸ್ ಕ್ಲಬ್ ಮತ್ತು ಅಕ್ಟೇರಿಯಸ್
ಸ್ವಿಮ್ ಕ್ಲಬ್‌ನ ಈಜುಪಟುಗಳಾದ ಜ್ಯೋತಿ ಕೋರಿ (ಹೊಸಟ್ಟಿ) ಮತ್ತು ಅವರ ಪುತ್ರ ವಿಹಾನ್ ಕೆಎಲ್‌ಇ ಸಂಸ್ಥೆಯ ಸುವರ್ಣ ಜೆಎನ್‌ಎಂಸಿ ಈಜುಕೊಳದಲ್ಲಿ ಗುರುವಾರ ನಡೆದ ನಾನ್‌ಸ್ಟಾಪ್‌ ಸ್ವಿಮ್ಮಿಂಗ್ ರಿಲೆಯಲ್ಲಿ ಅಪರೂಪದ ಸಾಧನೆಗೆ ಸಾಕ್ಷಿಯಾಗಿದ್ದಾರೆ. 12 ಗಂಟೆ, 22 ನಿಮಿಷ ಈಜಿ ಇಂಡಿಯಾ ಅಂಡ್ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದರು.

44 ವರ್ಷದ ಜ್ಯೋತಿ, 12 ವರ್ಷದ ವಿಹಾನ್ ನಸುಕು 5.08ಕ್ಕೆ ಈಜಲು ಆರಂಭಿಸಿದರು. ಸಂಜೆ 5.30ಕ್ಕೆ ಮುಗಿಸಿದರು. ವಿಹಾನ್ 18 ಕಿ.ಮೀ, ಜ್ಯೋತಿ 12 ಕಿ.ಮೀ. ಈಜಿದರು. ಇಬ್ಬರೂ ರಿಲೆ ಮಾದರಿಯಲ್ಲಿ ತಲಾ ಒಂದೊಂದು ಗಂಟೆ ಈಜಿ ದಾಖಲೆ ಮೆರೆದರು.

ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ತೀರ್ಪುಗಾರ್ತಿ ರೇಖಾ ಸಿಂಗ್ ಈ ದಾಖಲೆಯನ್ನು ಖಚಿತಪಡಿಸಿದ್ದಾರೆ.

ಜ್ಯೋತಿ ಅವರು ಕಡೋಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಾಲಯ ತಾಂತ್ರಿಕ ಅಧಿಕಾರಿಯಾಗಿದ್ದಾರೆ. 38ನೇ ವಯಸ್ಸಿನಲ್ಲಿ ಈಜಲು ಪ್ರಾರಂಭಿಸಿ ರಾಷ್ಟ್ರಮಟ್ಟದ ಏಳು ಟೂರ್ನಿಗಳಲ್ಲಿ 26 ಪದಕ, ರಾಜ್ಯ ಮಟ್ಟದ ಟೂರ್ನಿಗಳಲ್ಲಿ 54 ಪದಕ, ಶ್ರೀಲಂಕಾದಲ್ಲಿ ನಡೆದ ಅಹ್ವಾನಿತ ಟೂರ್ನಿಯಲ್ಲಿ 6 ಪದಕ ಪಡೆದಿದ್ದಾರೆ. ಅವರ ಪುತ್ರ ವಿಹಾನ್ ರಾಜ್ಯ ಮತ್ತು ಜಿಲ್ಲಾಮಟ್ಟದ ಟೂರ್ನಿಗಳಲ್ಲಿ ಒಟ್ಟು 22 ಪದಕ ಪಡೆದಿದ್ದು ಬೆಳಗಾವಿ ಸೆಂಟ್ ಝೇವಿಯರ್ಸ್ ವಿದ್ಯಾರ್ಥಿಯಾಗಿದ್ದಾನೆ. ತಾಯಿ ಮತ್ತು ಮಗ ರಿಲೇ ಮಾದರಿಯಲ್ಲಿ ಈಜಿ ದಾಖಲೆ ಮಾಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ.