ಬೆಳಗಾವಿ : ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬೆಳಗಾವಿಯಲ್ಲಿ ಕಾಂಗ್ರೆಸ್ ಸೋತಿದೆ. ಪ್ರಭಾವಿ ನಾಯಕಿಯಾಗಿ ಗುರುತಿಸಿಕೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಕಳಪೆ ಸಾಧನೆ ಮಾಡಿದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮೃಣಾಲ್ ಹೆಬ್ಬಾಳ್ಕರ್ ಅವರ ತಾಯಿ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಲಭಿಸಿದೆ. ಬಿಜೆಪಿ ಇಲ್ಲಿ 46,000 ಮತಗಳ ಬಹುದೊಡ್ಡ ಮುನ್ನಡೆ ಪಡೆದುಕೊಂಡಿದೆ.

ಪ್ರತಿ ಸಲದಂತೆ ಈ ಸಲವು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ ಬಿಜೆಪಿ ಅಭ್ಯರ್ಥಿಗೆ ಬಹುದೊಡ್ಡ ಲೀಡ್ ತಂದು ಕೊಟ್ಟಿದ್ದಾರೆ.

ಅಭಯ ಪಾಟೀಲ ಅವರು ತಾವು ಪ್ರತಿನಿಧಿಸುವ ಬೆಳಗಾವಿ ದಕ್ಷಿಣ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರಿಗೆ 71,000 ಮತಗಳ ಬಹುದೊಡ್ಡ ಮುನ್ನಡೆ ತಂದುಕೊಟ್ಟಿದ್ದಾರೆ.

ಬಿಜೆಪಿಯ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಗೋಕಾಕ ಮತಕ್ಷೇತ್ರದಲ್ಲಿ 24,000, ಇನ್ನೊಬ್ಬ ಮಾಜಿ ಸಚಿವ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಪ್ರತಿನಿಧಿಸುವ ಅರಭಾವಿ ಮತಕ್ಷೇತ್ರದಲ್ಲಿ ಬಿಜೆಪಿ 21 ಸಾವಿರ ಮತಗಳ ಮುನ್ನಡೆ ಪಡೆದುಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಬೆಳಗಾವಿ ಉತ್ತರ ಮತ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ 4000 ಮತಗಳ ಮುನ್ನಡೆ ಪಡೆದುಕೊಂಡಿದೆ. ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ ಹಾಗೂ ವಿ.ಐ. ಪಾಟೀಲ ಅವರ ನೆರವಿನಿಂದ ಬೈಲಹೊಂಗಲದಲ್ಲಿ ಈ ಬಾರಿ ಬಿಜೆಪಿ 9000 ಮತಗಳ ಮುನ್ನಡೆ ಪಡೆದುಕೊಂಡಿದೆ.

ಕಾಂಗ್ರೆಸ್ ಅಭ್ಯರ್ಥಿ ಈ ಬಾರಿ ಸವದತ್ತಿ ಮತಕ್ಷೇತ್ರದಲ್ಲಿ 16,000 ಹಾಗೂ ರಾಮದುರ್ಗ ಮತಕ್ಷೇತ್ರದಲ್ಲಿ ಕೇವಲ 400 ಮತಗಳ ಮುನ್ನಡೆ ಪಡೆದುಕೊಂಡಿರುವುದು ಗಮನ ಸೆಳೆದಿದೆ. ಈ ಮೂಲಕ ಎಂಟು ಮತಕ್ಷೇತ್ರಗಳ ಪೈಕಿ ರಾಮದುರ್ಗ ಹಾಗೂ ಸವದತ್ತಿಯಲ್ಲಿ ಮಾತ್ರ ಕಾಂಗ್ರೆಸ್ ಬಿಜೆಪಿ ಗಿಂತ ಲೀಡ್ ಗಳಿಸಿದೆ.