ಬೆಳಗಾವಿ : ಗಣಿತ ವಿಜ್ಞಾನದ ತಾಯಿ ಬೇರು. ವೈಜ್ಞಾನಿಕ ಸಂಶೋಧನೆಯು ಗಣಿತದ ಮೇಲೆಯೇ ಅವಲಂಬಿಸಿದೆ ಎಂದು ಪ್ರಾಚಾರ್ಯ ಎಂ. ಜಿ. ಹೆಗಡೆ ಅಭಿಪ್ರಾಯಪಟ್ಟರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗಣಿತಶಾಸ್ತ್ರ ವಿಭಾಗವು ಡಿ. 23ರಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಗಣಿತಶಾಸ್ತ್ರ ದಿನಾಚರಣೆ ಮತ್ತು ಗಣಿತತಜ್ಞ ಶ್ರೀನಿವಾಸ ರಾಮಾನುಜನ್ ಜಯಂತಿಯ ನಿಮಿತ್ತ ಶ್ರೀನಿವಾಸ ರಾಮಾನುಜನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಜಗತ್ತಿನ ಶ್ರೇಷ್ಠ ಗಣಿತತಜ್ಞರಲ್ಲಿ ಶ್ರೀನಿವಾಸ ರಾಮಾನುಜನ್ ಅವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಗಣಿತ ಶಾಸ್ತ್ರಕ್ಕೆ ಅವರ ಕೊಡುಗೆ ಅಪಾರ. ಅವರು ಗಣಿತಕ್ಕೆ ಕೊಟ್ಟ ಕೊಡುಗೆಗಳಿಂದ ಜಗತ್ತು ಇಂದು ಅವರನ್ನು ಸ್ಮರಿಸಿಕೊಳ್ಳುತ್ತಿದೆ. ಪ್ರಾಚೀನ ಭಾರತದಲ್ಲಿ ಗಣಿತ ಕ್ಷೇತ್ರಕ್ಕೆ ವಿಶೇಷವಾದ ಮನ್ನಣೆಯಿತ್ತು. ಆರ್ಯಭಟ, ಬ್ರಹ್ಮಗುಪ್ತ, ವರಹಮೀರರಂಥ ಮಹಾನ್ ಗಣಿತತಜ್ಞರು ಭಾರತವನ್ನು ಬೆಳಗಿದರು. ತಮ್ಮ ಬೌದ್ಧಿಕ ಸಂಪತ್ತಿನ ಮೂಲಕ ಜಗತ್ತಿನ ಗಣಿತಲೋಕದಲ್ಲಿ ಭಾರತದ ಸ್ಥಾನವನ್ನು ಅಜರಾಮರವಾಗಿ ಉಳಿಸಿದರು. ವಿದ್ಯಾರ್ಥಿಗಳಿಗೆ ಶ್ರೀನಿವಾಸ ರಾಮಾನುಜನ್ ಅವರ ವ್ಯಕ್ತಿತ್ವ ಸದಾ ಮಾದರಿಯಾಗಿರಲಿ. ವಿದ್ಯಾರ್ಥಿಗಳು ಸಿದ್ಧಪಡಿಸಿದ ವಿಜ್ಞಾನಕ್ಕೆ ಸಂಬಂಧಿಸಿದ ವಾಲ್ ಮ್ಯಾಗಜ್ಹಿನ್ ಬಿಡುಗಡೆ ಮಾಡಿದರು.

ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಆದಿನಾಥ ಉಪಾಧ್ಯೆ ಮಾತನಾಡಿ, ಶ್ರೀನಿವಾಸ ರಾಮಾನುಜನ್ ಅವರ ಗಣಿತಶಾಸ್ತ್ರಕ್ಕೆ ನೀಡಿದ ಕೊಡುಗೆಗಳು ಮತ್ತು ಅವರ ಜೀವನ ವೃತ್ತಾಂತವನ್ನು ವಿವರಿಸಿದರು. ವಿದ್ಯಾರ್ಥಿನಿ ವಿಜಯಲಕ್ಷ್ಮೀ ಹಡಪದ ನಿರೂಪಿಸಿದರು. ಅಶ್ವಿನಿ ವಾಲಿ ಸ್ವಾಗತಿಸಿದರು, ಪೂಜಾ ಶಿವೋಲ್ಕರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.