ಬೆಳಗಾವಿ: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಗಾವಿ ನಗರದ ಸುತ್ತಲಿನಲ್ಲಿ ರಿಂಗ್ ರೋಡ್ ಅಭಿವೃದ್ಧಿ ಕಾಮಗಾರಿಯ ಭೂ ಸ್ವಾಧೀನ ಪ್ರಕ್ರಿಯೆಯನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸೂಚನೆ ನೀಡಿದರು.

ಬೆಳಗಾವಿ – ಹುನಗುಂದ – ರಾಯಚೂರು ಮಾರ್ಗದ ರಸ್ತೆ ನಿರ್ಮಾಣದ ಕುರಿತು ಹಾಗೂ ನೈರುತ್ಯ ರೈಲ್ವೆ ವಲಯಕ್ಕೆ ಸಂಬಂಧಿಸಿದಂತೆ ಬೆಳಗಾವಿ – ಕಿತ್ತೂರು – ಧಾರವಾಡ ನೂತನ ರೈಲ್ವೆ ನಿರ್ಮಾಣ ಹಂತದ ಪ್ರಕ್ರಿಯೆ ಕುರಿತು ಚರ್ಚಿಸಿ, ಭೂ ಸ್ವಾಧೀನಕ್ಕೆ ಕ್ರಮ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.

ಬೆಳಗಾವಿ ನಗರದ ರಸ್ತೆ ಮೇಲ್ ಸೇತುವೆ ನಿರ್ಮಾಣದ ಕಾಮಗಾರಿ ಪ್ರಗತಿ ಕುರಿತು ಚರ್ಚೆ ನಡೆಸಿ,ರೈಲ್ವೆ 3 ನೇ ಗೇಟ್ ಹತ್ತಿರ ನಿರ್ಮಾಣಗೊಳ್ಳುತ್ತಿರುವ ಕಾಮಗಾರಿಯು ಅರ್ಧಕ್ಕೆ ನಿಂತಿರುವ ವಿಷಯವನ್ನು ಪ್ರಸ್ತಾಪಿಸಿ ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ, ಉಪ ಪೊಲೀಸ್ ಆಯುಕ್ತ ಜಗದೀಶ್ ರೋಹನ್. ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ, NHAI ಯೋಜನಾ ನಿರ್ದೇಶಕ ಭುವನೇಶ್ವರ್ ಕುಮಾರ್, ಭೂಸ್ವಾಧೀನ ಅಧಿಕಾರಿ ಚೌಹಾಣ್, ನೈರುತ್ಯ ರೈಲ್ವೆ ವಲಯದ ಅಧಿಕಾರಿ ವಿನಯ್ ಕುಮಾರ್, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಸಬರದ, ರೈಲ್ವೆ ಲೈನ್ ಭೂ ಸ್ವಾಧೀನ ಅಧಿಕಾರಿ ಮಾರುತಿ ಬ್ಯಾಕೋಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.