ಬೆಳಗಾವಿ : ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ದುಷ್ಕರ್ಮಿಗಳು ಹಸುಗಳ ಕೆಚ್ಚಲು ಕೊಯ್ದು ಅಟ್ಟಹಾಸ ಮೆರೆದಿದ್ದಾರೆ. ಗೋವುಗಳನ್ನು ದೇವರಂತೆ ಪೂಜಿಸುವ ನಮ್ಮ ಸಮಾಜಕ್ಕೆ ಈ ಹೇಯ ಕೃತ್ಯವನ್ನು ಅರಗಿಸಿಕೊಳ್ಳಲಾಗದು, ಇದರಿಂದಾಗಿ ಸಮಾಜದ ಸ್ವಾಸ್ಥ್ಯ ಹಾಳಾಗಿರುವುದು ಅಕ್ಷರಶಃ ಸತ್ಯ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದ್ದಾರೆ.

ಸಮಾಜದ ಶಾಂತಿ ಕದಡುವ ದುರುದ್ದೇಶದಿಂದ ಮೂಕ ಪ್ರಾಣಿಗಳಿಗೆ ತೊಂದರೆ ನೀಡಿರುವುದು ಅಕ್ಷಮ್ಯ ಅಪರಾಧ. ಈ ಹೀನ ಕೃತ್ಯ ಎಸಗಿದ ದುಷ್ಟರಿಗೆ ಶಿಕ್ಷೆಯಾಗಲೇಬೇಕು ಎಂದು ಅವರು ಆಗ್ರಹಿಸಿದರು.

ಈಗಲಾದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಸಮಾಜಘಾತುಕರನ್ನು ಬಂಧಿಸಿ, ಶಿಕ್ಷೆ ವಿಧಿಸಿ, ಇನ್ನು ಮುಂದೆ ಮೂಕ ಪ್ರಾಣಿಗಳ ಪ್ರಾಣ ಹಾನಿಯಾಗುವುದನ್ನು ಸಂಪೂರ್ಣವಾಗಿ ತಡೆಯುವ ಪ್ರಯತ್ನ ಮಾಡಲೇಬೇಕು. ಸಮಾಜದಲ್ಲಿ ನಡೆಯುವ ಎಲ್ಲ ದುಷ್ಟ ಕೃತ್ಯಗಳನ್ನು ನೋಡಿ ಜಾಣ ಕುರುಡರಂತೆ ವರ್ತಿಸುತ್ತಿದ್ದ ಸರ್ಕಾರ ಇನ್ನು ಮುಂದೆಯೂ ಹೀಗೆಯೇ ನಡೆದು ಕೊಂಡರೆ ಅದರ ಘೋರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದರು.

ಗಾಯಗೊಂಡ ಹಸುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿ, ದುಷ್ಟತನದಿಂದ ಅಟ್ಟಹಾಸ ಮೆರೆದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಗ್ರಹಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.