ಬೆಂಗಳೂರು : ಭೋವಿ ನಿಗಮದ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಬೆಂಗಳೂರಿನಲ್ಲಿ ಇಂದು (ಸೋಮವಾರ) ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದರು.

ತಮ್ಮ ವಿರುದ್ಧದ ಆರೋಪಗಳನ್ನು ಹಿಂಪಡೆಯಬೇಕು ಅಥವಾ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಬೇಕು ಎಂದು ಶ್ರೀನಿವಾಸ ಪೂಜಾರಿ ಅವರು ಬ್ಯಾನರ್ ಹಿಡಿದು ಧರಣಿ ನಡೆಸಿದರು.

ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿ ನಡೆಸಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಸಚಿವರಾಗಿದ್ದಾಗ ಅವರು ನಿಭಾಯಿಸಿದ ಸಮಾಜ ಕಲ್ಯಾಣ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿತ್ತು ಎಂದು ಆರೋಪಿಸಿದ್ದರು.
ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿಯವರು ಆಗ್ರಹಿಸಿ ಒಂದು ವಾರದ ಗಡುವು ನೀಡಿದ್ದರು. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ‌ಜುಲೈ 29ರ ಬೆಳಗ್ಗೆಯಿಂದ ವಿಧಾನಸೌಧದ ಆವರಣದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋ ಇಟ್ಟುಕೊಂಡು ಸಂಸದ ಕೋಟ ಶ್ರೀನಿವಾಸ ಪೂಜಾರಿ ಧರಣಿ ನಡೆಸಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ‌ ನಾರಾಯಣ ಸ್ವಾಮಿ, ಶಾಸಕ ಸುರೇಶಕುಮಾರ, ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಎನ್. ರವಿಕುಮಾರ್, ಶಾಂತರಾಮ ಸಿದ್ದಿ ಮೊದಲಾದವರು ಸಾಥ್ ನೀಡಿದರು.