ಬೆಂಗಳೂರು: ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಪ್ರಿಯಂಕಾ ಜಾರಕಿಹೊಳಿ ಅವರು ಇಂದು ಡಿಸಿಎಂ ಡಿ. ಕೆ. ಶಿವಕುಮಾರ್‌ ಅವರನ್ನು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿ, ಆಶೀರ್ವಾದ ಪಡೆದರು.
ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ತಮ್ಮನ್ನು ಭೇಟಿಯಾಗಿದ್ದ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಆಶೀರ್ವಾದ ಮಾಡಿದ ಡಿ.ಕೆ. ಶಿವಕುಮಾರ್‌ ಅವರು, ಅತಿ ಕಿರಿಯ ಸಂಸದರರು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಕಂಡ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ‌ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

ಈ ವೇಳೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ರಾಜಕೀಯದ ಕುರಿತು ಡಿಕೆಶಿ ಪಾಠ ಮಾಡಿದ್ದು, ಸದನದಲ್ಲಿ ಸದಾ ಹಾಜರಿದ್ದು, ಎಲ್ಲ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಶ್ರದ್ಧೆಯಿಂದ ಆಲಿಸಿ, ಸೂಕ್ತವಾಗಿ ಸ್ಪಂದಿಸುವವರು ಮಾತ್ರ ಉತ್ತಮ ಸಂಸದೀಯ ಪಟುವಾಗಿ ಬೆಳೆಯಲು ಸಾಧ್ಯ ಕಿವಿಮಾತು ಹೇಳಿದರು.

ಸದನದಲ್ಲಿ ಸಂಸದರಾಗಿ ಹೇಗೆ ರಾಜ್ಯದ ಹಿತ ಕಾಯಬೇಕು ಎಂಬ ಬಗ್ಗೆ ತಿಳಿಸಿದ ಡಿಸಿಎಂ ಡಿ.ಕೆ. ಶಿವಕುಮಾರ ಅವರು, ಗ್ರಂಥಾಲಯದ ಪ್ರಯೋಜನ ಪಡೆದು ಸದನದಲ್ಲಿ ಮುತ್ಸದ್ದಿ ರಾಜಕಾರಣಿಗಳು ಮಾಡಿರುವ ಭಾಷಣಗಳನ್ನು ಓದುವಂತೆಯೂ ಸಲಹೆ ಮಾಡಿದರು. ಅಲ್ಲದೇ ಜೊಲ್ಲೆ ಅವರ ವಿರುದ್ಧ ಪ್ರಚಂಡ ಬಹುಮತದಿಂದ ಜಯ ಸಾಧಿಸಿರುವುದಕ್ಕಾಗಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನಾವಲಗಟ್ಟಿ, ಬೆಳಗಾವಿ ಬೂಡಾ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಮಾಜಿ‌ ಸಚಿವರಾದ ವೀರಕುಮಾರ ಪಾಟೀಲ, ಮಾಜಿ ಶಾಸಕರಾದ ಕಾಕಾಸಾಹೇಬ ಪಾಟೀಲ, ಶಾಸಕ ಶಾಮ ಘಾಟಗೆ, ಯುವ ನಾಯಕ ರಾಹುಲ್‌ ಜಾರಕಿಹೊಳಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.