ಮಂಗಳೂರು: ಸಮುದ್ರಯಾನ ವಿಷಯಗಳ ಅಧ್ಯಯನದ ವಿಶ್ವವಿದ್ಯಾಲಯ ಮಂಗಳೂರಿನಲ್ಲಿ ಸ್ಥಾಪನೆಯಾಗಬೇಕಾದ ಅಗತ್ಯವಿದೆ. ಅದಕ್ಕೆ ಸಂಬಂಧಿಸಿದ ಯೋಜನಾ ವರದಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಶಯ ವ್ಯಕ್ತಪಡಿಸಿದರು.

ನವಮಂಗಳೂರು ಬಂದರು ‍ಪ್ರಾಧಿಕಾರ (ಎನ್‌ಎಂಪಿಎ) ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮುದ್ರಯಾನ ವಿಪತ್ತುಗಳ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆ ಈಗಾಗಲೇ ಕೆಲವು ಸಲಹಾ ಸಂಸ್ಥೆಗಳ ಜೊತೆ ಮಾತುಕತೆ ನಡೆದಿದ್ದು ವರದಿಯನ್ನು ಶೀಘ್ರದಲ್ಲೇ ಬಂದರು ಸಚಿವಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

‘ರಾಣಿ ಅಬ್ಬಕ್ಕ ಅವರ 500 ನೇ ಜಯಂತಿ ಆಚರಣೆಯ ಸಂದರ್ಭದಲ್ಲಿ ಸಮುದ್ರಯಾನ ವಿಷಯಗಳ ವಿಶ್ವವಿದ್ಯಾಲಯ ಸಿದ್ಧಗೊಂಡರೆ ಉತ್ತಮ. ವಿಶ್ವವಿದ್ಯಾಲಯಕ್ಕೆ ರಾಣಿ ಅಬ್ಬಕ್ಕ ಅವರ ಹೆಸರನ್ನೇ ಇಡಬೇಕು’ ಎಂದು ಹೇಳಿದ ಬ್ರಿಜೇಶ್ ಚೌಟ ಈ ವಿಶ್ವವಿದ್ಯಾಲಯ ಸ್ಥಾಪನೆಗೆ ಮಂಗಳೂರಿನಷ್ಟು ಸೂಕ್ತ ಜಾಗ ಬೇರೊಂದಿಲ್ಲ ಎಂದರು.

ಕರ್ನಾಟಕದ ವ್ಯಾಪಾರ ಕೇಂದ್ರವಾಗಲು ಮಂಗಳೂರಿಗೆ ಎಲ್ಲ ಅರ್ಹತೆಗಳೂ ಇವೆ. ಅದಕ್ಕೆ ಸಂಬಂಧಪಟ್ಟ ಅವಕಾಶಗಳನ್ನು ಬಳಸಿಕೊಳ್ಳಬೇಕು. ಸಮುದ್ರಯಾನದ ಅವಕಾಶಗಳು ಮತ್ತು ಸಂಭವನೀಯ ವಿಪತ್ತುಗಳ ಬಗ್ಗೆ ಅರಿವು ಮೂಡಿಸಲು ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ. ಇಲ್ಲಿನ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಹಡಗು ನಿರ್ಮಾಣ ಮತ್ತು ದುರಸ್ತಿಯ ಸಾಧ್ಯತೆಗಳತ್ತ ಗಮನ ಹರಿಸಬೇಕಾಗಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಬಂದರು ಪ್ರೇರಿತ ಅಭಿವೃದ್ಧಿ ಆಗಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಬಯಕೆ. ದೇಶದ ಸಮುದ್ರಯಾನ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ತೆಗೆದಿರಿಸಿದ್ದು ಹಡಗು ನಿರ್ಮಾಣ ಕ್ಲಸ್ಟರ್ ಬಗ್ಗೆಯೂ ಪ್ರಸ್ತಾಪ ಆಗಿತ್ತು. ಇವೆಲ್ಲವೂ ವಿಕಸಿತ್ ಭಾರತ್ ಪರಿಕಲ್ಪನೆಯ ಭಾಗವಾಗಿದ್ದು ಈ ಕನಸು ನನಸಾಗಲು ಬಂದರು ಮತ್ತು ಸಮುದ್ರಯಾನ ಕೈಗಾರಿಕೆ ಪ್ರಮುಖ ಕೊಡುಗೆ ನೀಡಬಲ್ಲುದು ಎಂದು ಬ್ರಿಜೇಶ್ ಚೌಟ ಹೇಳಿದರು.

ಹಡಗು ನಿರ್ಮಾಣ ಮತ್ತು ದುರಸ್ತಿ ಕೈಗಾರಿಕೆ ಸ್ಥಾಪನೆಯಾದರೆ ಕರಾವಳಿಯಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆ ಅವಕಾಶಗಳ ದೊಡ್ಡ ಸಾಗರವಾಗಿದ್ದು ಬಂದರು ಆಧಾರಿತ ಅಭಿವೃದ್ಧಿಯಲ್ಲಿ ಈ ಅವಕಾಶಗಳು ಹೆಚ್ಚು ತೆರೆದುಕೊಳ್ಳಲಿವೆ. ಮಂಗಳೂರು ಮತ್ತು ಬೆಂಗಳೂರು ನಡುವಿನ ರಸ್ತೆ ಸಂಪರ್ಕ, ಮಂಗಳೂರು–ಅಂಕೋಲಾ–ಹುಬ್ಬಳ್ಳಿ ನಡುವಿನ ರೈಲು ಸಂಪರ್ಕ ಬೆಳೆದರೆ ರಾಜ್ಯದ ಬೆಳವಣಿಗೆಗೆ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಎನ್‌ಎಂಪಿಎ ಅಧ್ಯಕ್ಷ ಎ.ವಿ.ರಮಣ ಮಾತನಾಡಿ ಭಾರತದ ಸಮುದ್ರ ಮತ್ತು ವಿದೇಶದ ಸಮುದ್ರ ಗಡಿಯಲ್ಲಿ ಸಂಚರಿಸುವಾಗ ಸಹಾಯ ಕೇಳುವ ನೆಪದಲ್ಲಿ ಅಪಾಯ ತಂದೊಡ್ಡಬಲ್ಲ ಅನಧಿಕೃತ ನೌಕೆಗಳ ಬಗ್ಗೆ ಎಚ್ಚರ ಇರಬೇಕು. ಕೆಲವರು ಇಂಥ ನೌಕೆಗಳಲ್ಲಿ ಭಾರತದ ವ್ಯಾಪ್ತಿಗೆ ಬಂದು ತೊಂದರೆ ಕೊಡಲು ಪ್ರಯತ್ನಿಸುತ್ತಾರೆ. ಇಂಥ ನೌಕೆಗಳು ಸಮುದ್ರದಲ್ಲಿ ತಿರುಗಾಡುವುದರಿಂದ ಬಂದರಿಗೆ ಮತ್ತು ಸಮುದ್ರದ ಪರಿಸರಕ್ಕೆ ಹಾನಿಯುಂಟುಮಾಡುತ್ತವೆ ಎಂದರು.

ಭಾರತದ ನಿಯಮಗಳಲ್ಲಿರುವ ಲೋಪಗಳನ್ನು ದುರುಪಯೋಗಪಡಿಸಿಕೊಂಡು ಫಿಟ್‌ನೆಸ್ ಸರ್ಟಿಫಿಕೆಟ್‌ ಪಡೆಯಲು ಹಲವರು ಪ್ರಯತ್ನಿಸುತ್ತಿರುತ್ತಾರೆ ಎಂದ ಅವರು ಮಂಗಳೂರು ಬಂದರನ್ನು 100+ಎಂಎಂಟಿ ಬಂದರಾಗಿ ಪರಿವರ್ತಿಸುವ ಕಾರ್ಯಸೂಚಿ ನವಮಂಗಳೂರು ಬಂದರು ಪ್ರಾಧಿಕಾರದ ಮಾಸ್ಟರ್ ಪ್ಲಾನ್‌ನಲ್ಲಿದ್ದು ಇದರಿಂದ ಭವಿಷ್ಯದಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಪ್ರಗತಿ ಕಾಣಲಿದೆ. ಈ ಬಾರಿ ಎನ್‌ಎಂಪಿಎಯ ಲಾಭ ₹ 455 ಕೋಟಿ ತಲುಪಲಿದೆ ಎಂದರು.