ರಾಮದುರ್ಗ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಶುಕ್ರವಾರ ದಿನವಿಡೀ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿದರು. ರಾಮದುರ್ಗದ ಹಲಗತ್ತಿ, ಲಿಂಗದಾಳ, ಇಡಗಲ್, ಚಿಕ್ಕತಡಸಿ‌ ಹಾಗೂ ಹಂಪಿಹೊಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಪರ ಮತಯಾಚಿಸಿದರು.

*ಸುಳ್ಳು ಹೇಳೋದೆ ಬಿಜೆಪಿಗರ ಕೆಲಸ*
ಕಾಂಗ್ರೆಸ್ ಪಕ್ಷದ ಎಂದರೆ ಬದ್ದತೆ, ಕೊಟ್ಟ ಮಾತನ್ನು ಎಂದೂ ತಪ್ಪೋದಿಲ್ಲ. ಸುಳ್ಳು ಹೇಳುವುದರಲ್ಲಿ ಬಿಜೆಪಿಗರು ನಿಸ್ಸಿಮರು. ಕೊಟ್ಟ ಮಾತನ್ನು ಎಂದೂ ನಡೆಸಿಕೊಟ್ಟಿಲ್ಲ. ಬಡವರ ಬಗ್ಗೆ ಕಾಳಜಿ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ನಾವು ಕಾಂಗ್ರೆಸ್ ಪಕ್ಷದ ಅಭಿವೃದ್ಧಿ, ಸಾಧನೆಗಳನ್ನು ನೋಡಿಕೊಂಡು ಮತ ಕೇಳುತ್ತೇವೆ ಎಂದು ಹೇಳಿದರು.

ರಾಮದುರ್ಗ ತಾಲೂಕಿನಲ್ಲಿ 53 ಸಾವಿರ ಕುಟುಂಬಗಳಿಗೆ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಸಿಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿರಿಯ ಶಾಸಕರು ಆಗಿರುವ ಅಶೋಕ್ ಪಟ್ಟಣ್ ಅವರ ಸಹಕಾರದೊಂದಿಗೆ ಸರ್ಕಾರದಲ್ಲಿ ಮಂತ್ರಿಯಾಗಿರುವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ಎಂದು ಹೇಳಿದರು.

ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಅಂತ ಬಿಜೆಪಿಯವರು ಕಾಂಗ್ರೆಸ್ ಮೇಲೆ ಕೇಸ್ ದಾಖಲು ಮಾಡಿದ್ದಾರೆ. ಕರೋನಾ ಬಂದ್ಮೇಲೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂಥ ಸ್ಥಿತಿಯಲ್ಲಿ ಬಡಜನರ ಒಳಿತಿಗಾಗಿ ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ‌. ಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದು ಹೇಳಿದರು.

ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದ್ದು, ಆಶಾ ಕಾರ್ಯಕರ್ತರ ಸಂಬಳ ಜಾಸ್ತಿ ಮಾಡಿದ್ದು ಕೂಡ ಕಾಂಗ್ರೆಸ್ ಸರ್ಕಾರ‌‌. ಬ್ರಿಟಿಷರು ದೇಶವನ್ನು ಕೊಳ್ಳೆ ಹೊಡೆದು ಹೋದಾಗ ನಮ್ಮಲ್ಲಿ ಸೂಜಿ ತಯಾರಿಸಲೂ ಆಗುತ್ತಿರಲಿಲ್ಲ. ಈಗ ಚಂದ್ರಯಾನಕ್ಕೆ ತಲುಪುವ ಮಟ್ಟಕ್ಕೆ ತಲುಪಿದ್ದೇವೆ. ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷ. ಮೃಣಾಲ್‌ ಹೆಬ್ಬಾಳ್ಕರ್ ಅವರಿಗೂ ಒಂದು ಅವಕಾಶ ಕೊಡಿ. ನಿಮ್ಮ ಮತವೇ ಗ್ಯಾರಂಟಿಗಳಿಗೆ ಸಿಗುವ ಬಲ. ಮನೆ ಮಗ ಬೇಕಾ ಬೇರೆಯವರು ಬೇಕಾ ನೀವೇ ಯೋಚಿಸಿ ಎಂದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

*ಅಭಿವೃದ್ಧಿಗೆ ಮತ ನೀಡಿ*
ಕಾಂಗ್ರೆಸ್ ಪಕ್ಷ ಸದಾ ಅಭಿವೃದ್ಧಿ ಬಗ್ಗೆ ಚಿಂತಿಸುವ ಪಕ್ಷ ಕಾಂಗ್ರೆಸ್. ಕಳೆದ 10 ತಿಂಗಳಿಂದ ಕಾಂಗ್ರೆಸ್ ಮಾಡಿರುವ ಸಾಧನೆಗಳನ್ನು ನೋಡಿ ಮತ ನೀಡಿ. ಮೃಣಾಲ್‌ ಹೆಬ್ಬಾಳ್ಕರ್ ಇನ್ನೂ ಯುವಕನಿದ್ದು, ಒಳ್ಳೆಯ ಅಭ್ಯರ್ಥಿ ಆಗಿದ್ದು ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಶಾಸಕ ಅಶೋಕ್ ಪಟ್ಟಣ ಕರೆ ನೀಡಿದರು.
ರಾಮದುರ್ಗ ತಾಲೂಕಿನಲ್ಲಿ ಕನಿಷ್ಟ 30-40 ಸಾವಿರ ಮತಗಳ ಲೀಡ್ ಕೊಡಲು ಸಂಕಲ್ಪ ಮಾಡೋಣ ಎಂದು ಪಟ್ಟಣ ವಿನಂತಿಸಿದರು.

ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಮಾತನಾಡಿ, ಕೆಲಸ ಮಾಡುವ ಉತ್ಸಾಹದಿಂದ, ಹಲವು ಕನಸು ಕಟ್ಟಿಕೊಂಡು ಕಣಕ್ಕಿಳಿದಿದ್ದೇನೆ. ಎಲ್ಲರ ಸಲಹೆ, ಮಾರ್ಗದರ್ಶನದೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ತಮ್ಮ ಅಮೂಲ್ಯ ಮತ ನೀಡುವ ಮೂಲಕ ಅವಕಾಶ ಮಾಡಿಕೊಡಿ ಎಂದು ವಿನಂತಿಸಿದರು.

ಕಾಂಗ್ರೆಸ್ ಮುಖಂಡರಾದ ಪ್ರದೀಪ್ ಪಟ್ಟಣ್, ಮಂಜುಳಾ ದೇವರೆಡ್ಡಿ, ಸುನಂದಾ ರಾ ದೊಡ್ಡವಾರ್, ಜಿ.ಬಿ.ರಂಗನಗೌಡ, ವೈ.ಬಿ.ಮುಧೋಳ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಪಾರ್ವತೆವ್ವ ಮೇಟಿ, ಸುರೇಶ್ ಪೂಜೇರ್ ಬಿ.ಎಸ್.ಪಾಟೀಲ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಫ್.ಟಿ.ಕೊಳಚಿ, ಎಚ್.ಎಂ.ಹಿರೇಮಠ, ಎಸ್.ಎಚ್.ವಗ್ಗರ್, ವೈ.ಎಚ್ ನೆಲಗುಡ್, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ಪುಂಡಲಿಕ್ ಹಳ್ಳಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಮೇಶ್ ಹೊಳೆನೂರು, ಶಿವಯೋಗಿ ಗೊಂದಿ, ಹನುಮಂತ ನುಂಗಾರಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.