ಸುವರ್ಣಸೌಧ ಬೆಳಗಾವಿ : 2025ರ ವೇಳೆಗೆ ರಾಜ್ಯದ ಶೇ.80 ರಷ್ಟು ಪೊಲೀಸ್ ಸಿಬ್ಬಂದಿಗೆ ವಸತಿ ಗೃಹ ಕಲ್ಪಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಮಂಗಳವಾರ ವಿಧಾನ ಸಭೆಯ ಪ್ರಶೋತ್ನರ ಕಲಾಪದಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು.
ಈ ಹಿಂದೆ ಗೃಹ ಸಚಿವನಾಗಿದ್ದ ವೇಳೆ 2020ರ ವೇಳೆಗೆ ರಾಜ್ಯದಲ್ಲಿ 10 ರಿಂದ 15 ಸಾವಿರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದೆ. ನಂತರ ಬಂದ ಸರ್ಕಾರವು ಯೋಜನೆಯನ್ನು ಮುಂದುವರಿಸಿದೆ. ಗ್ರಾಮೀಣ ಹಾಗೂ ಅವಶ್ಯಕತೆ ಇರುವ ಕಡೆ ವಸತಿ ಗೃಹಗಳನ್ನು ನಿರ್ಮಿಸಲಾಗುವುದು. ಈಗಾಗಲೇ ಶೇ.40 ರಷ್ಟು ಸಿಬ್ಬಂದಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ ಎಂದರು.
ಹೊನ್ನಾಳಿ ತಾಲ್ಲೂಕು ನ್ಯಾಮತಿಯಲ್ಲಿ 12 ಹೊಸ ವಸತಿ ಗೃಹಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪೊಲೀಸ್ ಠಾಣೆಗೆ 2.26 ಎಕರೆ ಜಮೀನು ನೀಡಿದ್ದ ದಿವಂಗತ ಹೆಚ್.ಬಸವರಾಜಪ್ಪನವರ ಪತ್ನಿ ಹಾಗೂ ಮಕ್ಕಳು ರೂ.45 ಲಕ್ಷ ಹೆಚ್ಚಿನ ಪರಿಹಾರ ಕೋರಿ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈಗಾಗಲೇ ಅವರಿಗೆ ರೂ.53.92 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ನ್ಯಾಯಾಲಯದ ಆದೇಶ ಬಂದ ಕೂಡಲೇ ವಸತಿ ಗೃಹಗಳ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಶಾಸಕ ಶಾಂತನಗೌಡ ಡಿ.ಜಿ. ಚುಕ್ಕೆ ಗುರುತನ ಪ್ರಶ್ನೆ ಉತ್ತರಿಸಿದರು.
ಆಯವ್ಯಯದಲ್ಲಿ ಹೊಸ ಅಗ್ನಿಶಾಮಕ ಠಾಣೆಗೆ ಪ್ರಸ್ತಾವನೆ : ರಾಜ್ಯದ ಹಲವು ತಾಲ್ಲೂಕು ಕೇಂದ್ರಗಳಲ್ಲಿ ಹೊಸ ಅಗ್ನಿಶಾಮಕ ಠಾಣೆ ನಿರ್ಮಿಸಲು ಶಾಸಕರಿಂದ ಕಡೆಯಿಂದ ಮನವಿಗಳು ಬಂದಿವೆ. ಈ ಮನವಿಗಳನ್ನು ಪರಿಗಣಿಸಿ ಮುಂದಿನ ಆಯವ್ಯಯದಲ್ಲಿ ಹೊಸ ಅಗ್ನಿಶಾಮಕ ಠಾಣೆ ನಿರ್ಮಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಡಾ.ಜಿ.ಪರಮೇಶ್ವರ ಹೇಳಿದರು.
ಸದ್ಯ ನಿಯಮಗಳ ಅನುಸಾರ ನಗರ ಪ್ರದೇಶದಲ್ಲಿ 10 ಚದುರ ಕಿ.ಮೀ.ಗೆ ಒಂದು ಹಾಗೂ ಗ್ರಾಮೀಣ ಪ್ರದೇಶದಲ್ಲಿ 50 ಚದುರ ಕಿ.ಮೀ.ಗೆ ಒಂದು ಅಗ್ನಿಶಾಮಕ ಠಾಣೆ ಕಾರ್ಯ ನಿರ್ವಹಿಸುತ್ತಿವೆ. ಅಗ್ನಿ ಕರೆಗಳನ್ನು ಆಧರಿಸಿ ಕಾರ್ಯಚರಣೆ ನಡೆಸಲಾಗುತ್ತಿದೆ. ಮೂಡಲಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ವಾರ್ಷಿಕವಾಗಿ ಸರಾಸರಿ 8 ರಿಂದ 10 ಅಗ್ನಿ ಕರೆಗಳು ಸ್ವೀಕೃತಗೊಳ್ಳುತ್ತಿವೆ. ಇವುಗಳಿಗೆ ಸ್ಪಂದಿಸಿ ಗೋಕಾಕ್ ಅಗ್ನಿಶಾಮಕ ಠಾಣೆಯಿಂದ ಬೆಂಕಿ ಅವಘಡಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಶಾಸಕ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ ಚುಕ್ಕೆ ಗುರುತಿನ ಪ್ರಶ್ನೆ ಉತ್ತರಿಸಿದರು.
ಮೂಡಲಗಿಯಲ್ಲಿ ಕಳೆದ ವರ್ಷ 2 ಶಾಪ್‍ಗಳಿಗೆ ಬೆಂಕಿ ಬಿದ್ದು ಕೋಟ್ಯಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ. ಗೋಕಾಕ್ ದೂರ ಇರುವುದರಿಂದ ಮೂಡಲಗಿಯಲ್ಲಿಯೇ ಅಗ್ನಿಶಾಮಕ ಠಾಣೆ ನಿರ್ಮಿಸುವುದು ಅಗತ್ಯವಿದೆ. ಈಗಾಗಲೇ 1.20 ಎಕರೆ ಜಮೀನು ಸಹ ಗುರುತಿಸಿ, ಗೃಹ ಇಲಾಖೆ ನೀಡಲಾಗಿದೆ. ಸರ್ಕಾರ ಆದ್ಯತೆ ಮೇರೆಗೆ ಕ್ರಮಕೈಗೊಳ್ಳಬೇಕು ಎಂದು ಶಾಸಕ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ ಕೋರಿದರು.