
ಹೆಬ್ರಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿಯಲ್ಲಿ ಸರಕಾರದಿಂದ ಶಾಲಾ ಎಲ್ಲಾ ವಿದ್ಯಾರ್ಥಿಗಳಿಗೆ 2025-26 ಸಾಲಿಗೆ ನೀಡಿದ ಸಮವಸ್ತ್ರ ಮತ್ತು ನೋಟ್ಸ್ ಪುಸ್ತಕಗಳ ವಿತರಣಾ ಕಾರ್ಯಕ್ರಮವು ಶಾಲೆಯಲ್ಲಿ ಜೂ. 18 ರಂದು ನಡೆಯಿತು.
ದಾನಿಗಳಾದ ಪೂರ್ಣಾಕರ ಶೆಟ್ಟಿ ಮೇಲ್ಮನೆ ಶಾಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ನೋಟ್ಸ್ ಪುಸ್ತಕಗಳನ್ನು ಮತ್ತು ಸರಕಾರ ನೀಡಿದ ಒಂದು ಜೊತೆ ಸಮವಸ್ತ್ರವನ್ನು 189 ವಿದ್ಯಾರ್ಥಿಗಳಿಗೆ ನೀಡಲಾಯಿತು.
ಹಿರಿಯ ಪಂಚಾಯತ್ ಸದಸ್ಯ ಗಣಪತಿ. ಎಂ ಮಾತನಾಡಿ ವಿದ್ಯಾರ್ಥಿಗಳು ಚೆನ್ನಾಗಿ ಕಲಿಯಲು ಶಿಕ್ಷಕರು, ಪೋಷಕರು, ದಾನಿಗಳು ಮುಖ್ಯ ಪಾತ್ರರಾಗಿರುತ್ತಾರೆ. ದಾನಿಗಳು ನೀಡಿದ ಉಚಿತ ನೋಟ್ಸ್ ಪುಸ್ತಕಗಳು ನಿಮ್ಮ ಕಲಿಕೆಗೆ ಸಹಾಯವಾಗಲಿದೆ. ನಾನು 30 ವರ್ಷಗಳಿಂದ ದಾನಿ ಗಳನ್ನು ಸಂಪರ್ಕಿಸಿ ಗ್ರಾಮದ ಎಲ್ಲಾ ಶಾಲೆಗಳಿಗೆ ಕೊಡುಗೆಯಾಗಿ ನೀಡಿದ ಪುಸ್ತಕ ವಿತರಣೆ ಮಾಡುವ ವ್ಯವಸ್ಥೆ ಮಾಡುತ್ತಿದ್ದೇನೆ. ಈ ಶಾಲೆಯಲ್ಲಿ ಕಲಿತು ವಿದ್ಯಾವಂತರಾದವರು ತಾನು ಕಲಿತ ಶಾಲೆಯನ್ನು ಮರೆಯದೆ ಉಚಿತ ಕೊಡುಗೆ ನೀಡುವಂತಾಗಬೇಕು. ವಿದ್ಯಾರ್ಥಿಗಳು ದಾನಿಗಳು ನೀಡಿದ ಪುಸ್ತಕಗಳ ಸದುಪಯೋಗಪಡಿಸಿಕೊಳ್ಳಿ ಎಂದರು.
ಗ್ರಾಮ ಪಂಚಾಯತ್ ಮುದ್ರಾಡಿ ಉಪಾಧ್ಯಕ್ಷೆ ರಮ್ಯಕಾಂತಿ,ಸದಸ್ಯ ಸನತ್ ಕುಮಾರ್ ಶಾಲಾ ಮಕ್ಕಳಿಗೆ ಪುಸ್ತಕ ಹಂಚಿ ಮಾತನಾಡಿದರು. ಎಸ್. ಡಿ. ಎಂ. ಸಿ ಅಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಅಧ್ಯಕ್ಷರ ಭಾಷಣ ಮಾಡಿದರು. ಪಂಚಾಯತ್ ಸದಸ್ಯ ಶುಭಧರ ಶೆಟ್ಟಿ, ದಾನಿ ನವೀನ್ ಶೆಟ್ಟಿ ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸ ಭಂಡಾರಿ ಸ್ವಾಗತಿಸಿದರು. ಸಹ ಶಿಕ್ಷಕ ಬೇಳಂಜೆ ಸತೀಶ್ ನಾಯ್ಕ್ ನಿರೂಪಿಸಿದರು. ಶಿಕ್ಷಕಿ ವಿಜಯ ಕಿಣಿ ವಂದಿಸಿದರು. ಎಸ್. ಡಿ. ಎಂ. ಸಿ. ಉಪಾಧ್ಯಕ್ಷ ಸುರೇಖಾ ಶೆಟ್ಟಿ ಎಸ್.ಡಿ.ಎಂ.ಸಿ ಸದಸ್ಯರು,ಶಿಕ್ಷಕರು ಹಾಜರಿದ್ದರು.