ಕೊಲ್ಲಾಪುರ : 1993ರ ಮುಂಬೈ ಬಾಂಬ್ ಸ್ಪೋಟದ ಆರೋಪಿಯನ್ನು ಕೊಲ್ಲಾಪುರ ಜೈಲಿನಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ಕಠಿಣ ನಿಯಂತ್ರಣ ಕಾಯ್ದೆಯ ಸೆಕ್ಷನ್ ಅಡಿಯಲ್ಲಿ ಆರೋಪ ಎದುರಿಸುತ್ತಿರುವ ಇವನನ್ನು ವಿಚಾರಣಾ ಕೈದಿಗಳು ಹತ್ಯೆ ಮಾಡಿದ್ದಾರೆ ಎಂದು ಕೊಲ್ಲಾಪುರ ಎಸ್ ಪಿ ಮಹೇಶ್ ಪಂಡಿತ್ ಹೇಳಿದ್ದಾರೆ.

ಮುಂಬೈ ಬಾಂಬ್ ಸ್ಪೋಟದ ಅಪರಾಧಿ ಮುನ್ನಾ ಅಲಿಯಾಸ್ ಮಹಮ್ಮದ್ ಅಲಿಯಾಸ್ ಮನೋಜ್ ಕುಮಾರ್ ಭವರ್ ಲಾಲ್ ಮೇಲೆ ಗುಂಪೊಂದು ಬೆಳಗ್ಗೆ ಆರು ಮೂವತ್ತರ ಸುಮಾರಿಗೆ ಹತ್ಯೆ ಮಾಡಿದೆ. ಜೈಲು ಕೈದಿಗಳ ಹಾಜರಾತಿ ದಾಖಲಿಸಿ ಕೊಂಡು ಕಾರಾಗೃಹದ ಸರ್ಕಲ್ ನಂಬರ್ ಎರಡರ ನೀರಿನ ಟ್ಯಾಂಕ್ ಬಳಿಯ ಬಯಲಿಗೆ ಕರೆ ತಂದ ಸಮಯದ ಬಳಿಕ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಸ್ನಾನಕ್ಕೆಂದು ನೀರಿನ ಟ್ಯಾಂಕ್ ಬಳಿ ಹೋದಾಗ ಮುನ್ನಾ ಮತ್ತು ಐವರು ಕ್ರಿಮಿನಲ್ ಗಳ ನಡುವೆ ಜಗಳ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಜಗಳದ ವೇಳೆ ಆರೋಪಿಗಳು ಮುನ್ನಾನ ತಲೆಗೆ ಮ್ಯಾನ್ ಹೋಲ್ ಮುಚ್ಚಳದಿಂದ ಹೊಡೆದಿದ್ದಾರೆ.

ಹತ್ಯೆಗೈದವರನ್ನು ದೀಪಕ್ ನೇತಾಜಿ ಖೋತ, ಸೌರಭ ವಿಕಾಸ ಸಿದ್ಧ, ಪ್ರತೀಕ್ ಅಲಿಯಾಸ್ ಪಿಲ್ಯ ಸುರೇಶ್ ಪಾಟೀಲ, ಸಂದೀಪ್ ಅಲಿಯಾಸ್ ಬಬ್ಲು ಶಂಕರ್ ಚೌಹಾನ್ ಮತ್ತು ಋತುರಾಜ್ ಎಂದು ಪೊಲೀಸರು ಗುರುತಿಸಿದ್ದಾರೆ. ಎಲ್ಲಾ ಐವರು ಒಂದೇ ಗ್ಯಾಂಗಿಗೆ ಸೇರಿದವರಲ್ಲ. ಅವರು ಒಟ್ಟಾಗಿ ಮುನ್ನಾ ಮೇಲೆ ಏಕೆ ದಾಳಿ ಮಾಡಿದ್ದಾರೆ ಎಂದು ತನಿಖೆ ನಡೆಸಲಾಗುತ್ತಿದೆ. ಅವರೊಂದಿಗೆ ಯಾವುದೇ ಹಿಂದಿನ ವಿವಾದಗಳಿಲ್ಲ ಎಂದು ತಿಳಿದುಬಂದಿದೆ. ಐವರು ಆರೋಪಿಗಳು ಹಲ್ಲೆಗೆ ಮುಂದಾದಾಗ ಜೈಲು ಸಿಬ್ಬಂದಿ ತಡೆಯಲು ಪ್ರಯತ್ನಿಸಿದರು. ಆದರೆ, ಅವರು ಸಿಬ್ಬಂದಿ ಮೇಲೂ ಹಲ್ಲೆ ನಡೆಸಿ ಮುನ್ನಾನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.