
ಮಂಗಳೂರು: ತೆಂಕುತಿಟ್ಟಿನ ಯಕ್ಷಗಾನ ವೇಷಧಾರಿ, ಹೆಸರಾಂತ ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ (67) ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು.
ಕಟೀಲು ಮೇಳದಲ್ಲಿ ಕಳೆದ 20 ವರ್ಷಗಳಿಂದ ವೇಷಧಾರಿಯಾಗಿ, 3ನೇ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದರು. ಧರ್ಮಸ್ಥಳ, ಕರ್ನಾಟಕ, ಸಸಿಹಿತ್ಲು ಮೇಳಗಳಲ್ಲಿ ತುಳು- ಕನ್ನಡ ಪ್ರಸಂಗಗಳಲ್ಲಿ ಎಲ್ಲ ಸ್ವರೂಪದ ಪಾತ್ರಗಳನ್ನು ನಿರ್ವಹಿಸಿದ್ದ ಕಲಾವಿದರಾಗಿದ್ದರು.
ಇಂದು ಮಧ್ಯಾಹ್ನ 1 ಗಂಟೆಗೆ ಕದ್ರಿ ಮಲ್ಲಿಕಟ್ಟೆ ಮೈದಾನದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಿದ್ದು, ಮಧ್ಯಾಹ್ನ 1.15 ಕ್ಕೆ ಕದ್ರಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಜರುಗಿತು. ಹೃದಯ ಸಂಬಂಧಿ ಅನಾರೋಗ್ಯ ನಿಮಿತ್ತ ಕೆಲ ದಿನಗಳ ಹಿಂದಷ್ಟೇ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನಡೆದು ಚೇತರಿಸಿ ಮನೆಗೆ ಮರಳಿದ್ದರು.