ಭೋಪಾಲ್ :
ಒಂದು ಕಾಲದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಂದ ಪ್ರೀತಿಯಿಂದ ಮೂರನೇ ಮಗ ಎಂದು ಕರೆಸಿಕೊಂಡಿದ್ದ
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಕಮಲನಾಥ್ ಅವರು ಪಕ್ಷ ತೊರೆಯುವ ಸಾಧ್ಯತೆ ದಟ್ಟವಾಗಿದೆ. ಪುತ್ರ ನಕುಲ್ ಜತೆಗೆ ಕಮಲನಾಥ್ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಕಮಲನಾಥ್ ಅವರಿಗೆ ರಾಜ್ಯಸಭೆ ಟಿಕೆಟ್ ನಿರಾಕರಿಸಿದ್ದೇ, ಅವರ ಈ ನಿರ್ಧಾರಕ್ಕೆ ಕಾರಣ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಮಲನಾಥ್ ಅವರು ಬಿಜೆಪಿ ಸೇರುವ ಸಾಧ್ಯತೆಯಿದೆ, ಆದರೆ ಕಾಂಗ್ರೆಸ್ ನಾಯಕತ್ವ ಅವರನ್ನು ತಡೆಯುವ ಯಾವ ಪ್ರಯತ್ನವನ್ನು ಮಾಡುತ್ತಿಲ್ಲ. ರಾಜ್ಯಸಭಾ ಟಿಕೆಟ್ ಗಾಗಿ ಕಮಲನಾಥ್ ಅವರು ಸಕ್ರಿಯವಾಗಿ ಲಾಬಿ ನಡೆಸುವುದರೊಂದಿಗೆ ವಿಷಯಗಳು ಕಗ್ಗಂಟಾಗಿದೆ ಎಂದು ಕಾಂಗ್ರೆಸ್ ಮೂಲಗಳನ್ನು ಉದ್ದೇಶಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಪಕ್ಷದ ನಾಯಕತ್ವದ ಬಗ್ಗೆ ಕೆಲವು ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ ವಿ.ಡಿ. ಶರ್ಮಾ ಅವರು ಹೇಳಿಕೊಂಡ ಒಂದು ದಿನದ ನಂತರ, ಕಾಂಗ್ರೆಸ್ ನಾಯಕ ನಕುಲ್ ಕಮಲನಾಥ ಅವರು ತಮ್ಮ ಸಾಮಾಜಿಕ ಮಾಧ್ಯಮ ಬಯೋದಿಂದ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ತೆಗೆದುಹಾಕಿದ್ದು, ಸಂಭವನೀಯ ರಾಜಕೀಯ ಬದಲಾವಣೆಯ ಪ್ರಮುಖ ಸುಳಿವನ್ನು ನೀಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ನಕುಲನಾಥ ಅವರ ಈ ನಡೆ ಅವರ ತಂದೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ ಕೂಡ ಬಿಜೆಪಿ ಸೇರಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿದೆ.
ಕಮಲನಾಥ ಅವರು ಮುಂದಿನ 48 ಗಂಟೆಗಳಲ್ಲಿ ಕೇಸರಿ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆಲವು ರಾಷ್ಟ್ರೀಯ ವಾಹಿನಿಗಳು ವರದಿ ಮಾಡಿವೆ. ಇದು ನಡೆದರೆ 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ಗೆ ದೊಡ್ಡ ಹೊಡೆತವಾಗಿ ಪರಿಣಮಿಸಬಹುದಾಗಿದೆ.
ಕಮಲನಾಥ ಅವರು ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳ ಬಗ್ಗೆ, ಅವರು “ಶೀಘ್ರದಲ್ಲೇ ತಿಳಿಸುತ್ತೇನೆ” ಎಂದು ಹೇಳಿದ್ದಾರೆ..
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಅವರ ಪುತ್ರ ನಕುಲನಾಥ ಅವರು ರಾಹುಲ್ ಗಾಂಧಿಯವರ ‘ಭಾರತ ಜೋಡೋ ನ್ಯಾಯ ಯಾತ್ರೆ’ ಮಧ್ಯಪ್ರದೇಶ ರಾಜ್ಯವನ್ನು ಪ್ರವೇಶಿಸುವ ಮೊದಲು ಬಿಜೆಪಿ ಸೇರಬಹುದಾಗಿದೆ.
ಗ್ವಾಲಿಯರ್-ಚಂಬಲ್ ರಾಜಕಾರಣಿ ಅಶೋಕ ಸಿಂಗ್ ಅವರನ್ನು ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ನಾಮನಿರ್ದೇಶನ ಮಾಡುವ ಮೊದಲು ಪಕ್ಷದ ನಾಯಕತ್ವದ ಜೊತೆಗೆ ಸಮಾಲೋಚಿಸದ ಕಾರಣ ಕಮಲನಾಥ ಅವರು ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು, ಕಮಲನಾಥ ಎಂದಿಗೂ ಪಕ್ಷವನ್ನು ತೊರೆಯುವುದಿಲ್ಲ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.
“ನಾನು ನಿನ್ನೆ ರಾತ್ರಿ ಕಮಲನಾಥ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಛಿಂದ್ವಾರಾದಲ್ಲಿದ್ದಾರೆ. ಅವರು ನೆಹರೂ-ಗಾಂಧಿ ಕುಟುಂಬದೊಂದಿಗೆ ರಾಜಕೀಯ ಜೀವನ ಆರಂಭಿಸಿದ ವ್ಯಕ್ತಿ. ಆ ವ್ಯಕ್ತಿ ಸೋನಿಯಾ ಗಾಂಧಿ ಮತ್ತು ಇಂದಿರಾ ಗಾಂಧಿ ಅವರ ಕುಟುಂಬಗಳನ್ನು ಬಿಟ್ಟು ಹೋಗುತ್ತಾರೆ ಎಂದು ನೀವು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.