ಬೆಂಗಳೂರು : ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು, ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷಗಳ ಸ್ಥಾನ ಹಂಚಿಕೆಯಲ್ಲಿ ಭಾರಿ ಕೋಲಾಹಲ ಶುರುವಾಗಿತ್ತು. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಹಾಸನದ ಜೊತೆಗೆ ಮಂಡ್ಯ ಹಾಗೂ ಕೋಲಾರ ನಮ್ಮದೆಂದು ಹೇಳಿದರು. ಇದಕ್ಕೆ ಮುನಿಸ್ವಾಮಿ ಒಂದಿನಿತೂ ಮುನಿಸಿಕೊಳ್ಳದೇ ಅವರನ್ನು ಗೌರವಿಸುತ್ತೇನೆ ಎಂದರು.

ಇನ್ನು ಟಿಕೆಟ್ ವಿಚಾರಕ್ಕೆ ದೆಹಲಿಗೆ ತೆರಳಿರುವ ಮಂಡ್ಯ ಸಂಸದೆ ಸುಮಲತಾ ಬಿಜೆಪಿ ನಿರ್ಧಾರಕ್ಕೆ ಬದ್ಧವೆಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿ 20 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಈ ಪೈಕಿ 9 ಹಾಲಿ ಸಂಸದರಿಗೆ ಟಿಕೆಟ್‌ ಕೊಡದೇ ಕೈಬಿಡಲಾಗಿದೆ. ಈ ಪೈಕಿ ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಒಬ್ಬರೇ ಪಕ್ಷದ ತೀರ್ಮಾನ ವಿರೋಧಿಸಿದ್ದಾರೆ. ಜೊತೆಗೆ, ಹಾವೇರಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂತೇಶ್‌ಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕೂಡ ರೆಬೆಲ್ ಆಗಿದ್ದಾರೆ. ಆದರೆ, ಈಗ ಬಾಕಿ ಉಳಿದ 8 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆಯಲ್ಲಿ ಮೈತ್ರಿ ಪಕ್ಷಕ್ಕೂ 3 ಟಿಕೆಟ್ ಕೊಡುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್‌ ಕೋರ್ ಕಮಿಟಿ ಸಭೆ ಮಾಡಿ ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರಗಳಿಂದ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಜೆಡಿಎಸ್‌ ಮೈತ್ರಿ ಪಕ್ಷದ ಸಂಭಾವ್ಯ ಅಭ್ಯರ್ಥಿಗಳು:

ಹಾಸನ – ಪ್ರಜ್ವಲ್ ರೇವಣ್ಣ
ಮಂಡ್ಯ – ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ
ಕೋಲಾರ – ಮಲ್ಲೇಶ್ ಬಾಬು

ಜೆಡಿಎಸ್ ಕೋಲಾರ ಲೋಕಸಭಾ ಕ್ಷೇತ್ರ ತಮ್ಮದೆಂದು ಹೇಳುತ್ತಿದ್ದಂತೆ ಕೋಲಾರದ ಹಾಲಿ ಸಂಸದ ಮುನಿಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಕುಮಾರಣ್ಣ ಹಾಗೂ ದೇವೇಗೌಡರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ನಮ್ಮ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ. ನಮ್ಮ ಕಾರ್ಯಕರ್ತರು ಮೈತ್ರಿ ಬಗ್ಗೆ ಏನೂ ಮಾತನಾಡಬಾರದು. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತುಂಬಾ ಬಲವಾಗಿದೆ. ಕೊನೆ ಚುನಾವಣೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಇದ್ರು ಸಹ ನನಗೆ 7 ಲಕ್ಷ ಮತ ಬಂದಿದೆ. ನಾವೆಲ್ಲ ಈಗ ಎನ್‌ಡಿಎ ಅಭ್ಯರ್ಥಿ ಪರವಾಗಿ ಕೆಲಸ ಮಾಡ್ತೀವಿ. ಹೈಕಮಾಂಡ್ ಗೆ ನಮ್ಮ ಅಭಿಪ್ರಾಯ ತಿಳಿಸಿ ನಾವೆಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದೇವೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲರೂ ಮೋದಿ ಪರವಾಗಿ ಮತ ಹಾಕುತ್ತಾರೆ. ಈ ಬಾರಿ ಮೈತ್ರಿ ಅಭ್ಯರ್ಥಿ ಕನಿಷ್ಠ 3 ಲಕ್ಷ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ಹೇಳಿದ್ದಾರೆ.

ಮಂಡ್ಯ ಲೋಸಕಭಾ ಬಿಜೆಪಿ ಟಿಕೆಟ್‌ ವಿಚಾರದ ಕುರಿತು ಚರ್ಚೆ ಮಾಡಲು ನವದೆಹಲಿಗೆ ತೆರಳಿದ್ದ ಸಂಸದೆ ಸುಮಲತಾ ಅಂಬರೀಶ್ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚೆ ಮಾಡಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಸ್ಪರ್ಧೆ ಬಗ್ಗೆ ನಿರ್ಧಾರ ಇನ್ನು ಆಗಿಲ್ಲ. ನಿಶ್ಚಿಂತೆಯಿಂದ ಇರಿ ಏನೂ ನಿರ್ಧಾರ ಆಗಿಲ್ಲ ಎಂದು ನಡ್ಡಾ ಹೇಳಿದ್ದಾರೆ. ನಿಮ್ಮಂತ ನಾಯಕಿ ಪಕ್ಷಕ್ಕೆ ಬೇಕು. ಇಂದು ಮೀಟಿಂಗ್‌ನಲ್ಲಿ ಟಿಕೆಟ್‌ ಆಗುತ್ತದೆ. ಆನಂತರ ನಿಮಗೆ ಫೈನಲ್ ನಿರ್ಧಾರ ತಿಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ನಾನು ಸ್ಪರ್ಧೆ ಮಾಡಬೇಕು ಅನ್ನೋದಕ್ಕಿಂತ, ಮಂಡ್ಯದಲ್ಲಿ ಬಿಜೆಪಿ ಸ್ಪರ್ಧೆ ಮಾಡಬೇಕು. ಸ್ಪರ್ಧೆ ಮಾಡಿದ್ರೆ ಮಂಡ್ಯದಲ್ಲಿ ಬಿಜೆಪಿ ಬೇಸ್ ಉಳಿಯುತ್ತದೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧೆಯ ಬಗ್ಗೆ ಮಾತನಾಡಿ, ಅದು ಊಹಾಪೋಹ. ಯಾವ ಕ್ಷೇತ್ರ ಖಾಲಿ ಇರುತ್ತೆ ಅಲ್ಲಿ ನನ್ನ ಹೆಸರು ಜೋಡಿಸ್ತಿದ್ದಾರೆ. ಕಳೆದ ಬಾರಿ ಪಕ್ಷೇತರವಾಗಿ ನಿಲ್ಲಿ ಎಂದು ಅಭಿಮಾನಿಗಳು ಹೇಳಿದ್ದರು. ಮುಂದೆ ಯಾವುದೇ ನಿರ್ಧಾರ ಮಾಡುವುದಿದ್ದರೆ ಅವರನ್ನೇ ಕೇಳುತ್ತೇನೆ. ಇಂದು ಹೈಕಮಾಂಡ್ ಏನ್ ನಿರ್ಧಾರ ಆಗುತ್ತೆ ಅದನ್ನು ಬೆಂಬಲಿಗರೊಂದಿಗೆ ಚರ್ಚಿಸುತ್ತೇನೆ. ಮಂಡ್ಯದಲ್ಲಿ ಜೆಡಿಎಸ್ ಸ್ಪರ್ಧೆ ಮಾಡ್ತಿವಿ ಅನ್ನೋದು ಸಹಜ. ಏನೂ ಸಮಸ್ಯೆ ಆಗದೆ ಇರೋತರ ಮಾಡಬೇಕಾಗುತ್ತದೆ. ಪಕ್ಷ ಏನು ಹೇಳುತ್ತೆ ಅದನ್ನು ಮಾಡುತ್ತೇನೆ. ನಾಳೆ ಮಂಡ್ಯಕ್ಕೆ ಹೋಗಿ ಬೆಂಬಲಿಗರೊಂದಿಗೆ ಮಾತನಾಡ್ತಿನಿ. ಸಂಧಾನ ಮಾಡುವ ಪ್ರಯತ್ನ ಇಂದು ಆಗಿಲ್ಲ. ಇವತ್ತಿನ ಮಾತುಕತೆ ಮ್ಯೂಚುವಲ್ ಆಗಿತ್ತು. ಕಾರ್ಯಕರ್ತರನ್ನು ಬಿಟ್ಟುಕೊಟ್ಟು ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದಿದ್ದೇನೆ. ನಿಮ್ಮ ಬೆಂಬಲಿಗರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ನಡ್ಡಾ ಭರವಸೆ ನೀಡಿದ್ದಾರೆ. ಮೋದಿಯವರೂ ಭರವಸೆ ನೀಡಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.