ಗೋಕಾಕ : ಖನಗಾಂವ ಗ್ರಾಮದ ಮನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಸಹೋದರಿಯನ್ನು ಕೊಲೆ ಮಾಡಿದ್ದಾನೆ.

ಸವದತ್ತಿ ತಾಲೂಕಿನ ಮಾಡಮಗೇರಿ ಗ್ರಾಮದ ಸುಜಾತಾ ಮಂಜುನಾಥ ಛತ್ರಕೋಟಿ (24) ಮೃತರು. ಗೋಕಾಕ ತಾಲೂಕಿನ ಏಳಪಟ್ಟಿಯ ಬಂಗಾರಪ್ಪ ಈರಯ್ಯನವರ ಆರೋಪಿ.

‘ತನ್ನೊಂದಿಗೆ ಅಕ್ರಮ ಸಂಬಂಧ ಬೆಳೆಸುವಂತೆ ಬಂಗಾರಪ್ಪನು ತನ್ನ ಪತ್ನಿಯ ವಿವಾಹಿತ ಸಹೋದರಿಗೆ ಒತ್ತಾಯಿಸಿದ್ದ. ಇದಕ್ಕೆ ಸುಜಾತಾ ನಿರಾಕರಿಸಿದ ಕಾರಣ, ಶನಿವಾರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಎದೆ, ಹೊಟ್ಟೆಗೆ ಮಾರಕಾಸ್ತ್ರಗಳಿಂದ ಇರಿದು ಗಂಭೀರವಾಗಿ ಹಲ್ಲೆ ಮಾಡಿದ್ದ. ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾರೆ’ ಎಂದು ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಸುಜಾತಾ ಹಲವು ತಿಂಗಳಿಂದ ಕುಟುಂಬ ಸಮೇತವಾಗಿ ಖನಗಾಂವ ಗ್ರಾಮದಲ್ಲಿ ವಾಸವಿದ್ದರು. ಅವರ ಪತಿಯು ಬಂಗಾರಪ್ಪ ವಿರುದ್ಧ ದೂರು ನೀಡಿದ್ದು, ತನಿಖೆ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.