ಮೈಸೂರು: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕೇವಲ ಎರಡೇ ದಿನ ಬಾಕಿ ಇದೆ. ಈಗಾಗಲೇ ಎಕ್ಸಿಟ್ಪೋಲ್ ಹೊರಬಿದ್ದಿದ್ದು ಬಹುತೇಕ ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸಲಿದೆ ಎಂಬ ಸರ್ವೆ ಬಂದಿದೆ.
ಇದರ ಜೊತೆಗೆ ಮೈಸೂರಿನ ಶ್ವಾನವೊಂದು ಫಲಿತಾಂಶದ ಭವಿಷ್ಯ ನುಡಿದಿದೆ. ಮೈಸೂರಿನ ಕೆ.ಟಿ. ಸ್ಟ್ರೀಟ್ನ ಕಾಲಭೈರವೇಶ್ವರ ದೇಗುಲದಲ್ಲಿ ಭೈರವ ಎಂಬ 2 ವರ್ಷದ ಶ್ವಾನ ಈ ಬಾರಿ ನರೇಂದ್ರ ಮೋದಿಯವರು ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದೆ.
ಗೋಪಿನಾಥ್ ಎಂಬುವವರು ಸಾಕಿರುವ ಭೈರವ ಶ್ವಾನದ ಮುಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಅವರ ಭಾವಚಿತ್ರವಿಟ್ಟಾಗ ಶ್ವಾನ ಮೋದಿಯವರ ಭಾವಚಿತ್ರ ಆಯ್ಕೆ ಮಾಡುವ ಮೂಲಕ ಫಲಿತಾಂಶದ ಭವಿಷ್ಯ ನುಡಿದಿದೆ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾಗಿರುವ ಎಂ ಲಕ್ಷ್ಮಣ್ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಭಾವಚಿತ್ರ ತೋರಿಸಿದಾಗ ಶ್ವಾನ ಯದುವೀರ್ ಭಾವಚಿತ್ರ ಆಯ್ಕೆ ಮಾಡಿದೆ. ಈ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಕೇಸರಿ ಪಡೆಯದ್ದೇ ಪಾರುಪತ್ಯ. ಬಿಜೆಪಿಯ ಸಾರಥಿಯಾಗಿ ಎರಡು ಅವಧಿಯಲ್ಲೂ ಪಾಂಚಜನ್ಯ ಮೊಳಗಿಸಿರುವ ಮೋದಿಗೆ ಈ ಬಾರಿಯೂ ಅದೃಷ್ಟ ಖುಲಾಯಿಸುವ ಮುನ್ಸೂಚನೆ ಸಿಕ್ಕಿದೆ. ಅಬ್ ಕೀ ಬಾರ್, ಚಾರ್ ಸೋ ಪಾರ್ ಎಂದಿದ್ದ ಬಿಜೆಪಿ ತನ್ನ ಗುರಿ ಮುಟ್ಟಲ್ಲ ಅಂತಾ ಕೆಲ ಸಮೀಕ್ಷೆಗಳು ಹೇಳ್ತಿದ್ರೆ, ಔರ್ ಏಕ್ ಬಾರ್ ಮೋದಿ ಸರ್ಕಾರ್ ಅಂತಾ ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿತಿವೆ.