ಮಾರ್ಚ್ 5 ರಂದು ಬೆಳಗಾವಿಗೆ ಜೆ.ಪಿ ನಡ್ಡಾ ಆಗಮನ

ಬೆಳಗಾವಿ :
ಮಾರ್ಚ್ 5 ರಂದು ಮಂಗಳವಾರ ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬೆಳಗಾವಿಗೆ ಆಗಮಿಸುತ್ತಿದ್ದು ಈ ಕುರಿತು ಪೂರ್ವಭಾವಿ ಸಭೆಯನ್ನು ಭಾಜಪ ಗ್ರಾಮಾಂತರ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆಸಲಾಯಿತು.

ಈ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಭಾಜಪ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಅವರು ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಾರ್ಚ್ 5 ರಂದು ಮಂಗಳವಾರ ಬೆಳಗಾವಿಗೆ ಆಗಮಿಸಲಿದ್ದು ಪಕ್ಷದ ವಿವಿಧ ಕಾರ್ಯಕ್ರಮ ಹಾಗೂ ಸಭೆಗಳಲ್ಲಿ ಭಾಗವಹಿಸುವರು ಎಂದು ಹೇಳಿದರು.

ಮಾರ್ಚ್ 5 ಮಂಗಳವಾರದಂದು ಬೆಳಿಗ್ಗೆ ಚಿಕ್ಕೋಡಿಯಲ್ಲಿ ನಡೆಯುವ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ ಬೆಳಗಾವಿ ನಗರದಲ್ಲಿ ನಡೆಯುವ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಭೆಯಲ್ಲಿ ಭಾಗವಹಿಸುವರು, ನಂತರ ಸಾಯಂಕಾಲ ಜಿಲ್ಲೆಯ ಪ್ರಬುದ್ಧರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಹೇಳಿದರು.

ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರು, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಬೆಳಗಾವಿ ಜಿಲ್ಲೆಗೆ ಬರುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಉಂಟು ಮಾಡಿದೆ. ಎಲ್ಲ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಕೇಂದ್ರ ಸರ್ಕಾರದ ಯೋಜನೆ ಪಡೆದ ಫಲಾನುಭವಿಗಳಿಗೆ, ಪ್ರಭುದ್ಧರಿಗೆ ಕಾರ್ಯಕ್ರಮದ ಮಾಹಿತಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ರಾದ ಗೀತಾ ಸುತಾರ, ಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಸಂಜಯ್ ಪಾಟೀಲ, ಚಂದ್ರಶೇಖರ ಕವಟಗಿ, ಬಸವರಾಜ್ ಯಂಕಂಚಿ, ಪ್ರಕಾಶ್ ಅಕ್ಕಲಕೋಟ, ಉಜ್ವಲ ಬಡವನಾಚೆ, ಬೆಳಗಾವಿ ಮಹಾನಗರ ಪಾಲಿಕೆ ಉಪ ಮಹಾಪೌರ ಆನಂದ ಹಾಗೂ ಬೆಳಗಾವಿ ಗ್ರಾಮಂತರ ಜಿಲ್ಲೆ , ಮಹಾನಗರ ಜಿಲ್ಲೆಯ ಮುಖಂಡರು ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.