ಬೆಳಗಾವಿಯ ಹಾಲಿ ಸಂಸದೆ ಮಂಗಲಾ ಸುರೇಶ ಅಂಗಡಿ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಜಯಪ್ರಕಾಶ್ ನಡ್ಡಾ ಅವರನ್ನು ಬೆಳಗಾವಿಯ ತಮ್ಮ ನಿವಾಸಕ್ಕೆ ಆಹ್ವಾನಿಸಿ ಲೋಕಸಭಾ ಚುನಾವಣೆ ಕುರಿತು ಮಾತುಕತೆ ನಡೆಸಿರುವುದು ಭಾರಿ ಮಹತ್ವ ಪಡೆದುಕೊಂಡಿದೆ. ಬೆಳಗಾವಿ: ಬೆಳಗಾವಿಗೆ ಮಂಗಳವಾರ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾ ಅವರನ್ನು ಬೆಳಗಾವಿಯ ಹಾಲಿ ಸಂಸದೆ ಮಂಗಲಾ ಸುರೇಶ ಅಂಗಡಿ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದು ಬೆಳಗಾವಿ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಕಳೆದ ಉಪಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಮಂಗಲಾ ಸುರೇಶ ಅಂಗಡಿ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪ ಬಹುದು ಎಂಬ ವದಂತಿ ಹರಡಿದೆ. ಈ ನಿಟ್ಟಿನಲ್ಲಿ ಮಂಗಲಾ ಅಂಗಡಿ ಅವರು ಜಯಪ್ರಕಾಶ್ ನಡ್ದಾ ಅವರನ್ನು ಭೇಟಿ ಆಗಿರುವುದು ನಾನಾ ಚರ್ಚೆಗಳಿಗೆ ಕಾರಣವಾಗಿದೆ. ಮಂಗಲಾ ಅಂಗಡಿಯವರ ಪತಿ ದಿ.ಸುರೇಶ ಅಂಗಡಿ ಅವರು ಕಳೆದ ಎರಡೂವರೆ ದಶಕಗಳಿಂದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ. ಈ ಬಲವಾದ ಹಿಡಿತವನ್ನು ಮುಂದುವರಿಸಿಕೊಂಡು ಹೋಗುವ ತಂತ್ರವಾಗಿ ಮಂಗಲಾ ಅಂಗಡಿ ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿರುವ ಸಾಧ್ಯತೆಗಳು ಇವೆ. ಯಾವುದೇ ಕಾರಣಕ್ಕೂ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ಯರ ಪಾಲಾಗಬಾರದು ಎಂಬ ಪರೋಕ್ಷ ಸಂದೇಶವನ್ನು ಅವರು ರವಾನಿಸಿದಂತಿದೆ. ಅವರ ಪುತ್ರಿಯರಾದ ಸ್ಪೂರ್ತಿ ಪಾಟೀಲ, ಶ್ರದ್ಧಾ ಶೆಟ್ಟರ್ ಮತ್ತು ಅಳಿಯ ಸಂಕಲ್ಪ ಶೆಟ್ಟರ ಉಪಸ್ಥಿತರಿದ್ದದ್ದು ಗಮನ ಸೆಳೆಯಿತು.