
ಚೆನ್ನೈ : ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಬಿಜೆಪಿಯ ತಿರುನಲ್ವೇಲಿ ಶಾಸಕ ನೈನಾರ್ ನಾಗೇಂದ್ರನ್ ಅವರನ್ನು ಆಯ್ಕೆ ಮಾಡಲಾಗಿದೆ.
ನೈನಾರ್ ನಾಗೇಂದ್ರನ್ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಹುದ್ದೆಗೆ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕೆ. ಅಣ್ಣಾಮಲೈ ಅವರು ನೈನಾರ್ ನಾಗೇಂದ್ರನ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಬಿಜೆಪಿಯ ಇತರ ನಾಯಕರು ಅದನ್ನು ಅನುಮೋದಿಸಿದರು. ನೈನಾರ್ ನಾಗೇಂದ್ರನ್ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಅಧಿಕೃತ ಘೋಷಣೆಯನ್ನು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಿಂದ ಮಾಡಲಾಗುತ್ತದೆ.
ಅಣ್ಣಾಮಲೈ ತಾವು ಬಿಜೆಪಿ ರಾಜ್ಯಾಧ್ಯಕ್ಷನ ಸ್ಪರ್ಧೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದರಿಂದ ಈ ಹುದ್ದೆಗೆ ವನತಿ ಶ್ರೀನಿವಾಸನ್ ಮತ್ತು ತಮಿಳಿಸೈ ಸೌಂದರರಾಜನ್ ಅವರಂತಹ ಹೆಸರುಗಳ ಕೇಳಿಬಂದಿದ್ದರೂ ಅಂತಿಮವಾಗಿ ನಾಗೇಂದ್ರನ್ ಆಯ್ಕೆಯಾಗಿದ್ದಾರೆ.
ಅವರು ದಕ್ಷಿಣ ತಮಿಳುನಾಡಿನ ತಿರುನಲ್ವೇಲಿಯವರು, ಇದು ಬಿಜೆಪಿ ತನ್ನ ಪಕ್ಷವನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ಪ್ರದೇಶ. ಎರಡನೆಯದಾಗಿ, ಅವರು ರಾಜ್ಯದ ಮತ್ತೊಂದು ಪ್ರಭಾವಿ ಸಮುದಾಯವಾದ ತೇವರ್ ಸಮುದಾಯಕ್ಕೆ ಸೇರಿದವರು. ಈ ಸಮುದಾಯ ತಮಿಳುನಾಡಿನ ಜನಸಂಖ್ಯೆ ಸುಮಾರು ಶೇ.10-12ರಷ್ಟಿದ್ದಾರೆ ಎನ್ನಲಾಗಿದೆ. ನೈನಾರ್ ನಾಗೇಂದ್ರನ್ ಅವರು ಮೂಲತಃ ಎಐಎಡಿಎಂಕೆಯಿಂದ ಬಂದವರು. ಎಐಎಡಿಎಂಕೆ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಹೀಗಾಗಿ ಎಐಎಡಿಎಂಕೆ ಜೊತೆ ಅವರು ಉತ್ತಮವಾಗಿ ವ್ಯವಹರಿಸುತ್ತಾರೆ ಎಂದು ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಅವರು ಎಐಎಡಿಎಂಕೆಯ ಸಂಸ್ಕೃತಿ ಮತ್ತು ಸೂಕ್ಷ್ಮತೆಗಳ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.