ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭಗುಡಿ ಸಹಿತ ಮೊದಲ ಹಂತ ರಚನೆ ಪೂರ್ಣಗೊಂಡಿದೆ. ಅಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಿದೆ. ಮುಂದಿನ ಹಂತಗಳ ನಿರ್ಮಾಣ ಮುಂದುವರಿಯಲಿದೆ. ಅಲ್ಲಿ ಮೂಲ ವಿಗ್ರಹವೇನೂ ಇರುವುದಿಲ್ಲವಾದ್ದರಿಂದ ಮಂದಿರ ಪೂರ್ಣವಾಗದೇ ವಿಗ್ರಹ ಪ್ರತಿಷ್ಠೆ ಸರಿಯಲ್ಲ ಎಂದು ಕೆಲವರು ಹೇಳುತ್ತಿರುವುದರಲ್ಲೇನೂ ಅರ್ಥ ಇಲ್ಲ. ಅದು ಕೇವಲ ಬಾಯಿತೀಟೆ ತೀರಿಸಿಕೊಳ್ಳಲು ಅಥವಾ ಮನಸ್ಸಿನ ವಿಷ ಕಾರಿಕೊಳ್ಳಲು ಎಂದೇ ಭಾವಿಸಬೇಕಾಗುತ್ತದೆ. ರಾಮ ಮಂದಿರ ಟ್ರಸ್ಟಿನಲ್ಲಿ ಎಲ್ಲವನ್ನೂ ಬಲ್ಲ ಹಿರಿಯರು, ಪ್ರಾಜ್ಞರು ಇದ್ದಾರೆ. ಅವರು ಪಕ್ಷಾತೀತರೂ ಆಗಿದ್ದಾರೆ. ಅವರು ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಹೇಳುವುದು ತಪ್ಪಾಗುತ್ತದೆ. ಧಾರ್ಮಿಕವಾಗಿ ಯಾವ ಯಾವ ಕ್ರಮಗಳನ್ನು ಕೈಕೊಳ್ಳಬೇಕೋ ಅದನ್ನೆಲ್ಲ ಅವರು ಪೂರ್ಣಗೊಳಿಸಿರುತ್ತಾರೆ. ಯಾವ ಕ್ರಮದಿಂದ ನಡೆಯಬೇಕೋ ಅದೇ ಕ್ರಮದಲ್ಲಿ ನಡೆಯುತ್ತದೆ.
ಎಲ್ಲ ಸಂದರ್ಭಗಳಲ್ಲೂ ಅಪಸ್ವರವೆತ್ತುವ ಒಂದು ವರ್ಗ ಇದ್ದೇಇರುತ್ತದೆ. ಅವರು ಸ್ವಂತಕ್ಕೆ ಯಾವ ಒಳ್ಳೆಯ ಕೆಲಸವನ್ನು ಮಾಡುವವರಲ್ಲ. ಬೇರೆಯವರು ಮಾಡಿದರೆ ಸಹಿಸುವವರು ಅಲ್ಲ. ಇಂದು ದೇಶದಾದ್ಯಂತ, ಅಷ್ಟೇ ಏಕೆ , ವಿದೇಶಗಳಲ್ಲೂ ಸಹ ಜನರು ಅನುಭವಿಸುತ್ತಿರುವ ಸಂತೋಷ ಸಂಭ್ರಮಗಳನ್ನು ನೋಡಿದಾಗ ವಿಸ್ಮಯವೂ ಆಗುತ್ತದೆ, ಸಂತಸವೂ ಆಗುತ್ತದೆ. ಆ ಸಂತಸ ಅನುಭವಿಸಲಾರದವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಅವರು ಕಳೆದುಕೊಳ್ಳುವ ಈ ಸಂತಸಕ್ಕೆ ಯಾರೇನು ಮಾಡಲಾದೀತು.
ರಾಮಾಯಣ ವಿಶ್ವ ಮಾನ್ಯತೆ ಪಡೆದ ಐತಿಹಾಸಿಕ ಮಹಾಕಾವ್ಯ. ಅದನ್ನು ರಚಿಸಿದ ವಾಲ್ಮೀಕಿ ವಿಶ್ವಮಾನ್ಯ ಕವಿ. ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತ ಎಲ್ಲರೂ ಕೋಟಿ ಕೋಟಿ ಭಾರತೀಯರ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತುಬಿಟ್ಟಿದ್ದಾರೆ. ಅದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಟೀಕೆ ಟಿಪ್ಪಣೆಗಳು ಇಲ್ಲದ ವಸ್ತು , ಇಲ್ಲದ ಕಾಲ ಯಾವುದಿದೆ? ಶ್ರೀರಾಮ -ಸೀತೆಯರ ಮೇಲೇ ಅಪವಾದ ಬಂತು. ಆ ಕಾಲದಲ್ಲು ಅಂಥವರು ಇದ್ದರು, ಈ ಕಾಲದಲ್ಲು ಅಂತಹ ಅವಿವೇಕಿಗಳು ಇದ್ದಾರೆ. ಅದೇ ಸಮಾಜದ ಇರುವಿಕೆಯ ಲಕ್ಷಣ. ನಿಂದಕರಿರಬೇಕಯ್ಯ ಎಂದು ದಾಸರು ಹೇಳಿದ್ದು ಸುಮ್ಮನೆ ಅಲ್ಲ.
ರಾಮಾಯಣ ಜಗತ್ತಿನ ಹಲವು ರಾಷ್ಟ್ರಗಳಲ್ಲಿ, ಹಲವು ಭಾಷೆಗಳಲ್ಲಿ , ಹಲವು ಬಗೆಯಾಗಿ ವ್ಯಾಪಿಸಿಕೊಂಡ ಮಹಾಚರಿತ್ರೆ. ಬೌದ್ದದೇಶವೆನಿಸಿದ ಥೈಲ್ಯಾಂಡ್ ನಲ್ಲಿ ವಾಲ್ಮಿಕಿ ರಾಮಾಯಣವೇ ರಾಮಕಿಯಾನ್/ ರಾಮಾಖ್ಯಾನವಾಗಿ ಅಲ್ಲಿಯ ರಾಷ್ಟ್ರೀಯ ಕಾವ್ಯವೆನಿಸಿದೆ. ಶ್ರೀ ರಾಮ ಹನುಮಂತ ಅಲ್ಲಿಯ ಜನರ ಪ್ರೀತಿಗೆ ಪಾತ್ರರಾದವರು. ಅಲ್ಲಿಯ ಎಲ್ಲ ಅರಸರ ಹೆಸರಿನ ಆರಂಭದಲ್ಲೂ ಒಂದನೆಯ ರಾಮ , ಎರಡನೆಯ ರಾಮ ಎಂದು ಸೇರಿಸಲಾಗುತ್ತದೆ. ಈಗ ಇರುವವನು ಹನ್ನೊಂದನೆಯ ರಾಮ. ಶ್ರೀಲಂಕಾ, ನೇಪಾಳ, ಬ್ರಹ್ಮ ದೇಶ, ಮಲೇಷ್ಯಾ, ಇಂಡೋನೇಷ್ಯಾ ಮೊದಲಾದ ದೇಶಗಳಲ್ಲೂ ರಾಮಾಯಣ ತನ್ನ ಪ್ರಭಾವ ಉಳಿಸಿಕೊಂಡಿದೆ. ಇಂತಹ ಒಂದು ಸಾರ್ವಕಾಲಿಕ ಮತ್ತು ಸರ್ವಮಾನ್ಯ ಮಹಾಕಾವ್ಯ ಮತ್ತು ಅದರ ಪಾತ್ರಗಳನ್ನು ಸೃಷ್ಟಿಸಿದ ಭಾರತ ದೇಶ ಅದಕ್ಕಾಗಿ ಹೆಮ್ಮೆ ಪಡಬೇಕಾಗಿದೆ.
– ಎಲ್. ಎಸ್. ಶಾಸ್ತ್ರಿ