
ಡಂಬಳ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಮೂರು ದಶಕಗಳಿಂದ ಶಿಕ್ಷಕರಾಗಿ ಅನುಪಮ ಸೇವೆ ಸಲ್ಲಿಸಿದ ಲಿಂಗಾಯತ ಬಣಜಿಗ ಸಮಾಜದ ಹಿರಿಯ ಶರಣ ಜೀವಿಗಳಾಗಿದ್ದ ಗುರುಪಾದಪ್ಪ ವಿ. ನಂಜಪ್ಪನವರ, ವಿದ್ಯಾರ್ಥಿಗಳಿಗೆ ತನು ಮನ ಧನದಿಂದ ಶಿಕ್ಷಣ ಧಾರೆಯೆರೆದಿದ್ದಾರೆ. ಶ್ರೀ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಯಲ್ಲಿ ಕಾಯಾ ವಾಚಾ ಮನಸಾದಿಂದ ಕಾರ್ಯ ನಿರ್ವಹಿಸಿದವರು. ಸಾವಿರಾರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ದುಡಿದವರು. ಡಂಬಳ – ಗದಗ ತೋಂಟದಾರ್ಯ ಮಠದ ಪರಮ ಭಕ್ತರಾಗಿದ್ದರು. ಶರಣ ಸಂಸ್ಕೃತಿಯ ಸಂಪನ್ನರಾದವರು, ಕಾಯಕ ಹಾಗೂ ದಾಸೋಹ ಪರಂಪರೆವುಳ್ಳವರಾಗಿದ್ದರು. ಇಳಿವಯಸ್ಸಿಯಲ್ಲಿ ಶರಣ ಸಂಸ್ಕೃತಿಯ ಮೌಲಿಕವಾದ ಗ್ರಂಥ ಅಧ್ಯಯನ ಮಾಡುತ್ತಿದ್ದರು. ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ಕಣ್ಣು ದಾನ ಮಾಡಿದವರು . ಶ್ರೀಯುತರ ಅಪೇಕ್ಷೆಯಂತೆ ಅವರ ಪಾರ್ಥಿವ ಶರೀರವನ್ನು ಗದಗದ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ನಂಜಪ್ಪನವರ ಪರಿವಾರದವರು ಅವರ ದೇಹದಾನ ಮಾಡುವ ಮೂಲಕ, ಅವರ ಶೈಕ್ಷಣಿಕ ದಾಸೋಹವನ್ನು ಮುಂದುವರಿಸಿದ್ದಾರೆ. ಮರಣದ ಸಂದರ್ಭದಲ್ಲಿ ಸಾರ್ಥಕ ಜೀವನಕ್ಕೆ ಮಾದರಿಯಾದರು. ಕೈ. ವಾ. ಗುರುಪಾದಪ್ಪ ನಂಜಪ್ಪನವರ ದಿನಾಂಕ 16/3/2025 ರಂದು 91 ನೇ ವಯಸ್ಸಿನಲ್ಲಿ ಲಿಂಗೈಕ್ಯರಾಗಿರುತ್ತಾರೆ. ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು, ಅಳಿಯಂದಿರು , ಸೊಸೆಯಂದಿರು, ಬಂಧು ಬಳಗ ಹಾಗೂ ಅಪಾರ ವಿದ್ಯಾರ್ಥಿ ಬಳಗದವರನ್ನು ಅಗಲಿದ್ದಾರೆ.
ಸಂತಾಪ:
ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ತಿನ ಸದಸ್ಯ ಎಸ್ ವಿ ಸಂಕನೂರ, ಮಾಜಿ ಸಚಿವ ಎಸ್ ಎಸ್ ಪಾಟೀಲ , ಕೆಎಲ್ಇ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಎಂ. ಕವಟಗಿಮಠ, ಶಂಕ್ರಣ್ಣ ಮುನವಳ್ಳಿ ಹಾಗೂ ಜಯಾನಂದ ಮುನವಳ್ಳಿ ,ತೋಂಟದಾರ್ಯ ಮಠದ ಕಾರ್ಯದರ್ಶಿ ಎಸ್ ಎಸ್ ಪಟ್ಟಣಶೆಟ್ಟಿ ಇನ್ನೂ ಹಲವಾರು ಗಣ್ಯ ಮಾನ್ಯರು ಸಂತಾಪ ಸೂಚಿಸಿದ್ದಾರೆ.