ಎರಡು ಹಕ್ಕಿಗಳನ್ನು ಒಳಗೊಂಡ ಹೃದಯ ಸ್ಪರ್ಶಿ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಸಾಯುತ್ತಿರುವ ಹಕ್ಕಿಯ ಜೀವವನ್ನು ಉಳಿಸಲು ಮತ್ತೊಂದು ಹಕ್ಕಿಯು ಶ್ರಮಿಸುತ್ತಿರುವ ಅತ್ಯಂತ ಮನಮಿಡಿಯುವ ದೃಶ್ಯವನ್ನು ಈ ವೀಡಿಯೊ ತೋರಿಸುತ್ತದೆ.
ಶವದಂತೆ ಕೆಳಗೆ ಬಿದ್ದಿದ್ದ ಇನ್ನೊಂದು ಹಕ್ಕಿಯನ್ನು ಯಶಸ್ವಿಯಾಗಿ ಉಸಿರಾಡುವಂತೆ ಮಾಡಲು ಮತ್ತೊಂದು ಹಕ್ಕಿ ಮಾನವರಿಗೆ ಮಾಡುವ ಕಾರ್ಡಿಯೋ ಪಲ್ಮನರಿ ರೀಸಸಿಟೈಟ್ (CPR)ವನ್ನು ಮಾಡುತ್ತಿದೆಯೇ ಎಂಬಂತೆ ಕಂಡುಬರುತ್ತದೆ. ಈಗ ಮತ್ತೆ ವೈರಲ್ ಆದ ಐದಾರು ವರ್ಷಗಳ ಹಿಂದಿನ ವೀಡಿಯೊ ಜನರ ಗಮನ ಸೆಳೆಯುತ್ತಿದೆ.
ವೀಡಿಯೊದಲ್ಲಿ ಗುಬ್ಬಚ್ಚಿ ತರಹ ಕಾಣುವ ಪಕ್ಷಿಯೊಂದು ಹಾರಿ ಬಂದು ಏಕಾಏಕಿ ಕೆಳಗೆ ಬಿದ್ದಿದೆ. ಅದರ ಉಸಿರಾಟವೂ ನಿಂತಂತೆ ತೋರುತ್ತದೆ. ಅದು ಶವದಂತೆ ಬಿದ್ದುಕೊಂಡಿದೆ. ಆಗ ಅದರ ಸಂಗಾತಿ ತಕ್ಷಣವೇ ಧಾವಿಸಿ ಬಂದು ಶವದಂತೆ ಬಿದ್ದಿಕೊಂಡಿದ್ದ ಹಕ್ಕಿಯ ನೆರವಿಗೆ ನಿಲ್ಲುತ್ತದೆ. ತನ್ನ ಸಂಗಾತಿಯನ್ನು ಬದುಕಿಸಲು ಅದು ಇನ್ನಿಲ್ಲದ ಪ್ರಯತ್ನ ಮಾಡುತ್ತದೆ. ಸಿಪಿಆರ್ ತರಹದ ತಂತ್ರವನ್ನು ಉಪಯೋಗಿಸಿದಂತೆ ಕಂಡುಬರುತ್ತಿದ್ದು, ಚಲನೆಯೇ ಇಲ್ಲದೆ ಬಿದ್ದುಕೊಂಡಿದ್ದ ಹಕ್ಕಿಗೆ ಮರುಚೈತನ್ಯ ನೀಡಲು ಅದು ಹೆಣಗಾಡಿದೆ. ಮನುಷ್ಯರಿಗೆ ಹೃಯದ ತೊಂದರೆಯಿಂದ ಎಚ್ಚರ ತಪ್ಪಿದಾಗ ಮಾಡುವ ಸಿಪಿಆರ್ ತರಹದ ತಂತ್ರವನ್ನೇ ಸಂಗಾತಿ ಹಕ್ಕಿ ಸುಮಾರು ಎರಡು ನಿಮಿಷಗಳ ಕಾಲ ಸತತವಾಗಿ ಮಾಡಿ ಹಕ್ಕಿಯನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸಿದೆ.
ಎರಡು ನಿಮಿಷ ಸತತ ಪ್ರಯತ್ನದ ನಂತರ ಸಂಗಾತಿ ಹಕ್ಕಿಯ ಪ್ರಯತ್ನ ಫಲ ನೀಡಿದೆ. ಕೆಳಗೆ ಶವದಂತೆ ಬಿದ್ದಿದ್ದ ಹಕ್ಕಿಗೆ ಚಲನೆ ಬಂದಿದೆ. ನಂತರ ಹಕ್ಕಿ ಎದ್ದು ಕುಳಿತಿದೆ. ತಕ್ಷಣವೇ ಎರಡು ಹಕ್ಕಿಗಳು ಅಲ್ಲಿಂದ ಹಾರಿ ಹೋಗಿವೆ. ಇದು ಎಲ್ಲಿ ನಡೆದದ್ದು ಎಂಬುದನ್ನು ಗೊತ್ತಿಲ್ಲ. ಆದರೆ ತನ್ನ ಸಂಗಾತಿಯನ್ನು ಬದುಕಿಸುವ ಆ ಹಕ್ಕಿಯ ಪ್ರಯತ್ನಕ್ಕೆ ಬಹುತೇಕ ಎಲ್ಲರೂ ಬೆರಗಾಗಿದ್ದಾರೆ.
ಪ್ರಕೃತಿಯು ಪ್ರಾಣಿಗಳು ಹಾಗೂ ಪಕ್ಷಿಗಳಿಗೆ ಬದುಕುಳಿಯುವ ತಂತ್ರಗಳನ್ನು ಕಲಿಸುತ್ತದೆ ಎಂಬುದಕ್ಕೆ ಈ ವೀಡಿಯೊ ಪರಿಪೂರ್ಣ ಉದಾಹರಣೆಯಾಗಿದೆ. ಅಗತ್ಯವಿರುವ ಜನರಿಗೆ ಸಹಾಯ ಮಾಡಲು ವೀಡಿಯೊ ನಮಗೆ ಕಲಿಸುತ್ತದೆ.